ದಲಿತ ಪ್ರಾಧ್ಯಾಪಕರಿಗೆ ದೆಹಲಿ ವಿವಿಯಲ್ಲಿ ಮೇಲ್ಜಾತಿ ಪ್ರಾಧ್ಯಾಪಕರಿಂದ ಸಾರ್ವಜನಿಕವಾಗಿ ಹಲ್ಲೆ

Prasthutha|

ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದ ಲಕ್ಷ್ಮೀ ಬಾಯಿ ಕಾಲೇಜಿನಲ್ಲಿ ಮೇಲ್ಜಾತಿ ಪ್ರಾಧ್ಯಾಪಕರೊಬ್ಬರು ಅದೇ ಕಾಲೇಜಿನ ದಲಿತ ಪ್ರಾಧ್ಯಾಪಕರನ್ನು ಗುರಿಯಾಗಿಸಿ ಗಂಭೀರ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

- Advertisement -

ಈ ಹಿನ್ನೆಲೆಯಲ್ಲಿ ತಪ್ಪಿತಸ್ಥ ಪ್ರಾಧ್ಯಾಪಕರನ್ನು ತಕ್ಷಣವೇ ವಜಾಗೊಳಿಸಬೇಕು. ಅದೇ ರೀತಿ ದಲಿತ ದೌರ್ಜನ್ಯ ನಿಗ್ರಹ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕೆಂದು ದಲಿತ ಸಂಘಟನೆ ಮತ್ತು ಶಿಕ್ಷಕರು ಒತ್ತಾಯಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದಲಿತ್ ಆದಿವಾಸಿ ಶಕ್ತಿ ಅಧಿಕಾರ ಮಂಚ್ (DASAM) ವತಿಯಿಂದ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಕಳೆದ ಸೋಮವಾರ ಈ ಘಟನೆ ನಡೆದಿದ್ದು, ಕೆಳಜಾತಿಗೆ ಸೇರಿದ ಶಿಕ್ಷಕರನ್ನು ಇನ್ನೊಬ್ಬ ಮೇಲ್ಜಾತಿ ಶಿಕ್ಷಕರು ಸಾರ್ವಜನಿಕವಾಗಿ ಹಲ್ಲೆ ನಡೆಸಿರುವ ಘಟನೆ ನಾಚಿಕೆಗೇಡಿನ ಸಂಗತಿಯೆಂದು ದೂರಿದರು.

ಲಕ್ಷ್ಮಿ ಬಾಯಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರಾಗಿರುವ ಡಾ.ರಂಜಿತ್ ಕೌರ್ ಅವರು ಡಾ. ನೀಲಂ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಈ ಹಿಂದೆಯೂ ಡಾ. ರಂಜಿತ್ ಕೌರ್ ಅವರು ನೀಲಂ ಅವರ ವಿರುದ್ಧ ನಿರಂತರ ಸಂಚು ರೂಪಿಸಿದ್ದಾರೆಂದು ಹೇಳಲಾಗಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಡಾ ನೀಲಂ ಅವರು ಪ್ರಾಂಶುಪಾಲರಿಗೆ ಲಿಖಿತ ದೂರು ನೀಡಿದ ಹೊರತಾಗಿಯೂ ದೂರನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅವರು ಭರತ್ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ಪೊಲೀಸರು ಎಸ್.ಸಿ, ಎಸ್.ಟಿ ದೌರ್ಜನ್ಯ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್.ಐ.ಆರ್ ದಾಖಲಿಸಲು ಭರತ್ ನಗರ ಪೊಲೀಸರು ಹಿಂದೇಟು ಹಾಕಿದ್ದಾರೆಂದು ಅವರು ಆರೋಪಿಸಿದ್ದಾರೆ. ಮಾತ್ರವಲ್ಲ ಪ್ರಕರಣವನ್ನು ಹಿಂಪಡೆಯುವಂತೆ ಕಾಲೇಜಿನ ಸಿಬ್ಬಂದಿ ಒತ್ತಡ ಹೇರುತ್ತಿದ್ದಾರೆ ಮತ್ತು ಈ ಸಂಬಂಧ ತನಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆಂದು ಅವರು ಮಾಹಿತಿ ನೀಡಿದ್ದಾರೆ.

ದಲಿತ ಮಂಡಳಿಯ ಅಧ್ಯಕ್ಷೆಯಾಗಿರುವ ಡಾ. ನೀಲಂ ಅವರ ಮೇಲಿನ ಹಲ್ಲೆಯನ್ನು ಇಡೀ ಶಿಕ್ಷಕ ಸಮುದಾಯ ಒಗ್ಗೂಡಿ ಘಟನೆಯಲ್ಲಿ ಭಾಗವಾಗಿರುವ ತಪ್ಪಿತಸ್ಥರ ವಿರುದ್ಧ ತಕ್ಷಣ ಕೈಗೊಳ್ಳಬೇಕೆಂದು ದಲಿತ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದೆ. ಮಾತ್ರವಲ್ಲದೆ ಪ್ರಾಧ್ಯಾಪಕ ಡಾ.ಕಾಂಚನ್ ಅಮಾನವೀಯ ಮತ್ತು ಕಾನೂನುಬಾಹಿರ ಘಟನೆಯನ್ನು ಖಂಡಿಸಿದ್ದಾರೆ. ಶ್ರೀಮತಿ ಎನಾ ಜಾಫರ್, ಪ್ರೊಫೆಸರ್ ಗೀತಾ ಸಹರೆ,ಡಾ. ಸುನ್ಮನ್ ಸೋಂಕರ್, ಶ್ರೀಮತಿ ಪುಷ್ಪಾ ವಿವೇಕ್, ಡಾ. ಸುಜಿತ್ ಕುಮಾರ್, ಡಾ. ಸಂದೀಪ್, ಡಾ. ಸಾಗರ್, ಸೇರಿದಂತೆ ಹಲವಾರು ಗಣ್ಯರು ಈ ಘಟನೆಯನ್ನು ಅಘಾತಕಾರಿಯೆಂದು ಬಣ್ಣಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಲಿತ್ ಆದಿವಾಸಿ ಶಕ್ತಿ ಅಧಿಕಾರ ಮಂಚ್ (DASAM) ನ ಪದಾಧಿಕಾರಿಗಳು ಡಾ. ನೀಲಂ ಅವರಿಗೆ ಕಾಲೇಜು ಆಡಳಿತ ಮಂಡಳಿಯಿಂದ ಯಾವುದೇ ಬೆಂಬಲ ಲಭಿಸಿರುವುದಿಲ್ಲ. ಮಾತ್ರವಲ್ಲದೆ ನಿರಂತರ ಕಿರುಕುಳವನ್ನು ಎದುರಿಸುತ್ತಿದ್ದಾರೆಂದು ತಿಳಿಸಿದರು. ಈ ಹಿನ್ನೆಲೆಯಲ್ಲಿ ಡಾ. ರಂಜೀತ್ ಕೌರ್ ಅವರನ್ನು ಎಲ್ಲಾ ಹುದ್ದೆಗಳಿಂದ ತಕ್ಷಣವೇ ವಜಾಗೊಳಿಸಿ, 1989 ರ ಎಸ್.ಸಿ, ಎಸ್.ಟಿ, ದೌರ್ಜನ್ಯ ನಿಗ್ರಹ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಬೇಕೆಂದು ಅದು ಒತ್ತಾಯಿಸಿದೆ. ಮಾತ್ರವಲ್ಲದೆ ಡಾ.ನೀಲಂ ಅವರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶಕ್ತವಾದ ಹೋರಾಟ ಸಂಘಟಿಸುತ್ತೇವೆಂದು ತಿಳಿಸಿದೆ.

Join Whatsapp