ಬೆಂಗಳೂರು: ಪರಿಶಿಷ್ಟ ವರ್ಗವನ್ನು ತುಳಿಯುವ ಮಸಲತ್ತು ವ್ಯವಸ್ಥಿತವಾಗಿ ನಡೆಯುತ್ತಿದ್ದು, ಪರಿಶಿಷ್ಟರು ಎಚ್ಚೆತ್ತುಕೊಳ್ಳದಿದ್ದರೆ ಉಳಿಗಾಲವಿಲ್ಲ. ಈಚೆಗೆ ದಲಿತ ಪತ್ರಕರ್ತರ ಅಭಿವ್ಯಕ್ತಿ ಹಕ್ಕುಚ್ಯುತಿ ಮಾಡಲಾಗುತ್ತಿದೆ. ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಹಿರಿಯ ಪತ್ರಕರ್ತ, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್. ವೀರಯ್ಯ ಹೇಳಿದರು.
ಕರ್ನಾಟಕ ರಾಜ್ಯ ಎಸ್ಸಿ ಎಸ್ಟಿ ಸಂಪಾದಕರ ಸಂಘ ಶುಕ್ರವಾರ ನಗರದ ಗಾಂಧಿಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ದಿ.ಬಿ.ರಾಚಯ್ಯ ದತ್ತಿ ನಿಧಿ ಪ್ರಶಸ್ತಿ ಹಾಗೂ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪರಿಶಿಷ್ಟರ ಅಭಿವೃದ್ಧಿಗಾಗಿಯೇ ಎಸ್ ಸಿ ಪಿ, ಟಿಎಸ್ಪಿ ಯೋಜನೆಯಡಿ ಒಟ್ಟು 306 ಯೋಜನೆಗಳಿವೆ. ಈ ಯೋಜನೆಡಿ ಪ್ರತಿ ಪರಿಶಿಷ್ಟರ ಅಭಿವೃದ್ಧಿಗೆ ಸಾಲುವಷ್ಟು ಹಣ ಮೀಸಲಿಡಲಾಗಿದೆ. ಆದರೆ, ಮೀಸಲು ಅನುದಾನ ಮಾತ್ರ ವ್ಯಯವಾಗಿಲ್ಲ. ಪರಿಶಿಷ್ಟ ಏಳಿಗಾಗಿಯೇ ಹಣ ಇದ್ದರೂ, ಯೋಜನೆಗಳೇಕೆ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದರು.
ಈಗಂತೂ ಪರಿಶಿಷ್ಟ ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕುವ ಹುನ್ನಾರ ಕೂಡ ನಡೆಯುತ್ತಿದೆ. ದಲಿತ ಪತ್ರಕರ್ತರು ಮುನ್ನಡೆಸುತ್ತಿರುವ ಪತ್ರಿಕೆಗಳು ಆರ್ಥಿಕವಾಗಿ ಜರ್ಜರಿತವಾಗಿ ಮುಚ್ಚಿಹೋಗುತ್ತಿವೆ. ಈ ನಿಟ್ಟಿನಲ್ಲೂ ಈಗಿನ ಸರ್ಕಾರದ ಕಠೋರ ಧೋರಣೆಯಿಂದಾಗಿ ಪರಿಶಿಷ್ಟ ಪತ್ರಿಕೆಗಳು ಅವಗಣನೆಗೆ ಗುರಿಯಾಗಿರುವುದು ದುರಂತ ಎಂದರು. ದಲಿತ ಪತ್ರಕರ್ತರು ಕೂಡ ಜ್ಞಾನ ವಿಕಸನಕ್ಕೆ ಒಡ್ಡಿಕೊಳ್ಳಬೇಕಿದೆ. ತಮ್ಮಹಕ್ಕುಗಳನ್ನು ದೈನೇಸಿಯಾಗಿ ಯಾಚಿಸಿ ಕೇಳುವುದನ್ನು ಇನ್ನಾದರೂ ಕೈಬಿಡಬೇಕಿದೆ. ಡಾ.ಬಿ.ಆರ್. ಅಂಬೇಡ್ಕರ್ ಸಾಂವಿಧಾನಿಕ ಹಕ್ಕುಗಳನ್ನು ಮೂಲಭೂತವಾಗಿ ನೀಡಿದ್ದಾರೆ. ಅವುಗಳನ್ನು ಎದೆಸೆಟೆಸಿ ಪಡೆದುಕೊಳ್ಳಬೇಕಿದೆ ಎಂದೂ ಹೇಳಿದರು.
ಪರಿಶಿಷ್ಟ ಏಳಿಗೆಯೇ ಸರಿಯಲ್ಲ ಎಂಬ ಧೋರಣೆ ಬಲವಾಗುತ್ತಿದೆ. ಪರಿಶಿಷ್ಟರಿಗೆ ನ್ಯಾಯಾಲಯ, ಸರ್ಕಾರ, ಅಧಿಕಾರ ವರ್ಗಗಳಲ್ಲೂ ನ್ಯಾಯ ಸಿಗದಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಸರ್ಕಾರ ದಲಿತರಿಗೆ ಮೃಷ್ಟಾನ್ನ ಕೊಡುವುದು ಬೇಡ , ಕನಿಷ್ಠ ಬದುಕಲಿಕ್ಕಾದರೂ ಒಂದು ಬ್ರೆಡ್ ಕೊಡಲು ಹಿಂಜರಿಯುತ್ತಿದೆ ಎಂದು ಮಾರ್ಮಿಕವಾಗಿ ನುಡಿದರು. ದರ ದುಪ್ಪಟ್ಟಿನ ಮತ್ತು ಡಿಜಿಟಲ್ ಈ ಕಾಲಘಟ್ಟದಲ್ಲಿ ಪತ್ರಿಕೆ ಪ್ರಕಟಿಸುವುದು ಒಂದು ಸವಾಲಾಗಿದೆ. ನ್ಯೂಸ್ ಪ್ರಿಂಟ್ ದರ ಗಗನಕ್ಕೇರಿದೆ. ಇಂಥಾ ಸಂಧರ್ಭದಲ್ಲಿ ಸಣ್ಣ ಮತ್ತು ಪ್ರಾದೇಶಿಕ ಪತ್ರಿಕೆಗಳ ಉಳಿವೆಗೆ ಸರ್ಕಾರ ಪಣ ತೊಡಬೇಕಿ. ಆದರೆ, ಈಗಿನ ಸರ್ಕಾರ ಅವುಗಳ ಕತ್ತುಹಿಚುಕುವ ಕೆಲಸ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ದಿ.ಬಿ.ರಾಚಯ್ಯ ದತ್ತಿ ನಿಧಿ ವಾರ್ಷಿಕ ಪ್ರಶಸ್ತಿ ಸ್ವೀಕರಿಸಿದ ಹಿರಿಯ ಪತ್ರಕರ್ತ ಕೋಟಿಗಾನಹಳ್ಳಿ ರಾಮಯ್ಯ ಮಾತನಾಡಿ, ದಲಿತ ಪ್ರಾತಿನಿಧ್ಯತೆ ಇಲ್ಲವಾಗುತ್ತಿದೆ. ಇದರಿಂದಾಗಿ ಡಾ.ಬಿ.ಆರ್.ಅಂಬೇಡ್ಕರ್ ದಲಿತ ಪ್ರಾತಿನಿಧ್ಯ ಅಶಯಕ್ಕೆ ಧಕ್ಕೆ ಉಂಟಾಗಿದೆ. ಇದನ್ನು ಪ್ರಶ್ನಿಸಬೇಕಾದ ಮಾಧ್ಯಮ ಕಾರ್ಪೋರೇಟ್ ಪೋಷಣೆಯ ಲ್ಲಿ ಮೈಮರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಮಾದರಿ ಪತ್ರಿಕೋದ್ಯಮ ಸಮಾಜಮುಖಿಯಾಗಲು ಸಾಧ್ಯವಿಲ್ಲ. ಪತ್ರಕರ್ತರು ಮಾದರಿಯಿಂದ ಹೊರಬರದ ಹೊರತು ಸಮಾಜ ಸ್ವಾಸ್ಥ್ಯ ಅಸಾಧ್ಯ. ಅಂತಹ ಮಾದರಿ ಪತ್ರಕರ್ತರಿಂದ ಸಮಾಜ ಯಾವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲು ಸಾಧ್ಯ ಎಂದರು. ಹಿಂದುತ್ವ ರಾಜಕಾರಣ ಬಲಿಷ್ಠವಾಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಮಾರಕ. ಹಿಂದೂ ಅಜೆಂಡಾ ಪ್ರತಿಷ್ಠಿತವಾಗುತ್ತಿದೆ. ಬಹುಳ್ಯ ಭಾರತ ಇದರಿಂದ ಸಾಧ್ಯವಿಲ್ಲ. ಬಹು ಸಂಸ್ಕೃತಿಯ ಭಾರತ ಪ್ರಜಾಮುಖಿಯಾಗಿ ಬೆಳೆಯಲು ಅಂಬೇಡ್ಕರ್ ರಚನೆಯ ಸಂವಿಧಾನವೇ ಕಾರಣವಾಗಿದೆ. ಅಂತಹ ಸಂವಿಧಾನ ಪಾಲನೆ ಕಡ್ಡಾಯವಾಗಬೇಕಿದೆ ಎಂದು ಸಲಹೆ ನೀಡಿದರು.
ಉತ್ತರ ಭಾರತದಲ್ಲಿ ಇಂಗ್ಲಿಷ್ ಗುಡಿಗಳನ್ನು ಕಟ್ಟಿದ್ದಾರೆ. ಅಲ್ಲಿ ಎ ಬಿ ಸಿ ಡಿ ಮಂತ್ರ ಜಪಿಸಲಾಗುತ್ತಿದೆ. ನಮ್ಮಲ್ಲೂ ಡಾ.ಬಿ.ಆರ್. ಅಂಬೇಡ್ಕರ್ ಹೆಸರಿನಲ್ಲಿ ಗುಡಿಗಳನ್ನು ನಿರ್ಮಿಸಬೇಕಿದೆ. ಅಲ್ಲಿ ಸಂವಿಧಾನ ಮತ್ತು ಅಂಬೇಡ್ಕರ್ ಆಶಯ ಮಂತ್ರವಾಗಿಸಬೇಕಿದೆ ಎಂದೂ ಹೇಳಿದರು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಡಾ.ಪಿ.ಎಸ್. ಹರ್ಷ ಮಾತನಾಡಿ, ಪರಿಶಿಷ್ಟ ಪತ್ರಕರ್ತರ ಹಾಗೂ ಪತ್ರಿಕೆಗಳ ನೆರವಿಗೆ ಸರ್ಕಾರ ಸಕರಾತ್ಮಕವಾಗಿದೆ. ಈ ಹಿಂದೆ ನನೆಗುದಿಗೆ ಬಿದ್ದಿದ್ದ ಅನೇಕ ಯೋಜನೆಗಳಿಗೆ ಚಾಲನೆ ನೀಡಿದ್ದೇನೆ. ಮುಂದೆಯೂ ಪತ್ರಕರ್ತರ ಏಳಿಗೆಗೆ ಸಹಕಾರ ನೀಡುತ್ತೇನೆ ಎಂದರು. ಹಿರಿಯ ಪತ್ರಕರ್ತರಾದ ಮೈಸೂರಿನ ಶಾಂತಕುಮಾರ್, ಕಲಬುರ್ಗಿಯ ಡಿ.ಶಿವಲಿಂಗಪ್ಪ, ಬಾಗಲಕೋಟೆಯ ಮುತ್ತುನಾಯ್ಕರ್ ಅವರಿಗೆ ಸಂಘದ ವಾರ್ಷಿಕ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಧ್ಯಕ್ಷ ಶಿವಾನಂದ ತಗಡೂರು, ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಮದನಗೌಡ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ, ರಾಜ್ಯ ಎಸ್ ಸಿ ಎಸ್ಟಿ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರೆಗೋಡು, ವಿವಿಧ ಜಿಲ್ಲೆಗಳ ಪತ್ರಿಕಾ ಸಂಪಾದಕರು ಇದ್ದರು. ಹಿರಿಯ ಪತ್ರಕರ್ತ ರವಿಕುಮಾರ್ ಟೆಲೆಕ್ಸ್ ಕಾರ್ಯಕ್ರಮ ನಿರೂಪಿಸಿದರು.