ಕುದುರೆ ಏರಿ ಮದುವೆ ಮೆರವಣಿಗೆ ಬಂದ ದಲಿತ ಮಧುಮಗನನ್ನು ಕೆಳಗಿಳಿಸಿ ಹಲ್ಲೆಗೈದ ಜಾತಿವಾದಿ ಉಗ್ರರು!

Prasthutha|

ಜೈಪುರ : ಕುದುರೆಯಲ್ಲಿ ಮೆರವಣಿಗೆ ನಡೆಸಿದ ದಲಿತ ಮಧುಮಗನನ್ನು ಜಾತಿವಾದಿ ಉಗ್ರರ ಗುಂಪೊಂದು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿದ ಘಟನೆ ರಾಜಸ್ಥಾನದ ಭಿಲ್ವಾರ ಜಿಲ್ಲೆಯಲ್ಲಿ ನಡೆದಿದೆ. ಭಿಲ್ವಾರ ಜಿಲ್ಲೆಯ ಕರೇರಾದ ಶಿವಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

- Advertisement -

ಮದುವೆ ಮೆರವಣಿಗೆಯಲ್ಲಿ ವರನನ್ನು ಕುದುರೆ ಮೇಲೆ ಕರೆತಂದ, ಮೆರವಣಿಗೆಯಲ್ಲಿ ಭಾಗವಹಿಸಿದ ಇತರರ ಮೇಲೂ ಈ ಉಗ್ರರು ದಾಳಿ ನಡೆಸಿ, ಹಲ್ಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ದಾಳಿಕೋರರು ರಜಪೂತ ಸಮುದಾಯದವರು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ. “ಶಿವಪುರ ಗ್ರಾಮದಲ್ಲಿ ದಲಿತ ಮಧುಮಗನನ್ನು ಕುದುರೆಯಿಂದ ಬಲವಂತವಾಗಿ ಕೆಳಗಿಳಿಸಿದ ಬಗ್ಗೆ ಮಾಹಿತಿ ಬಂದಿದೆ. ಮದುವೆ ಮೆರವಣಿಗೆಯಲ್ಲಿ ಭಾಗವಹಿಸಿದವರ ಮೇಲೆ ಹಲ್ಲೆ ಮಾಡಲಾಗಿದೆ. ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ” ಎಂದು ಕರೇರಾ ಪೊಲೀಸ್ ಠಾಣಾ ಉಸ್ತುವಾರಿ ಜಗದೀಶ್ ಪ್ರಸಾದ್ ಹೇಳಿದ್ದಾರೆ.

- Advertisement -

ಇಂತಹ ಹಲವು ಘಟನೆಗಳು ಈ ಹಿಂದೆಯೂ ನಡೆದಿವೆ. ಈಗಲೂ ನಡೆಯುತ್ತಲೇ ಇವೆ. ದಲಿತರು ಎಂದಿಗೂ ತಮಗೆ ಸರಿ ಸಮಾನವಾದ ರೀತಿಯಲ್ಲಿ ಬದುಕಬಾರದು ಎಂದು ಯೋಚಿಸುವ ಜಾತಿವಾದಿ ಉಗ್ರರು ಇಂದಿಗೂ ಸಾಕಷ್ಟು ಸಂಖ್ಯೆಯಲ್ಲಿದ್ದರೂ, ಈಗೆಲ್ಲಾ ಜಾತಿ ಇಲ್ಲ ಎಂದು ಸಂದರ್ಭಕ್ಕೆ ತಕ್ಕಂತೆ ಹೇಳಿಕೊಳ್ಳುವವರು ಕಡಿಮೆಯಿಲ್ಲ.    

ಫೋಟೊ ಕೃಪೆ : ಎಎನ್ ಐ  

Join Whatsapp