ಜೋಧ್ಪುರ: ಮೇಲ್ಜಾತಿಯವರ ನೀರಿನ ಪಾತ್ರೆ ಮುಟ್ಟಿದ್ದಕ್ಕೆ ಅಧ್ಯಾಪಕನಿಂದ ಥಳಿಸ್ಪಟ್ಟಿದ್ದ ದಲಿತ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.
ರಾಜಸ್ಥಾನದ ಜಲೋರ್ ಜಿಲ್ಲೆಯ ಸುರಾನದ ಸರಸ್ವತಿ ವಿದ್ಯಾ ಮಂದಿರ ಶಾಲೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ 9 ವರ್ಷದ ಬಾಲಕನೊಬ್ಬ ಮೇಲ್ಜಾತಿಯರಿಗೆ ಇಟ್ಟಿದ್ದ ನೀರಿನ ಪಾತ್ರೆಯನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ಅಲ್ಲಿನ ಶಿಕ್ಷಕ ಬಾಲಕನಿಗೆ ಥಳಿಸಿದ್ದ.
ಹಿಂಸಾತ್ಮಕ ರೀತಿಯಲ್ಲಿ ಥಳಿಸಿದ್ದರಿಂದ ಅಸ್ವಸ್ಥಗೊಂಡ ಬಾಲಕನನ್ನು ಜಲೋರ್ನ ಆಸ್ಪತ್ರೆ ದಾಖಲಿಸಲಾಯಿತಾದರೂ ಬಳಿಕ ಅಲ್ಲಿಂದ ಉದಯಪುರದ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಒಂದು ವಾರ ಚಿಕಿತ್ಸೆಯಲ್ಲಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅಹಮದಾಬಾದ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಮೃತಪಟ್ಟಿದ್ದಾನೆ ಎಂದು ತಂದೆ ದೇವರಾಮ್ ಮೇಘ್ವಾಲ್ ಹೇಳಿದ್ದಾರೆ.
ಬಾಲಕ ಜುಲೈ 20ರಂದು ಅಧ್ಯಾಪಕನಿಂದ ಥಳಿತಕ್ಕೊಳಗಾಗಿದ್ದು, ಗಂಭೀರ ಗಾಯಗಳಾಗಿದ್ದ ಕಾರಣ ಅಂದೇ ಪ್ರಜ್ಞಾ ಹೀನನಾಗಿದ್ದ ಎಂದು ತಂದೆ ವಿವರಿಸಿದ್ದಾರೆ.
ಬಾಲಕನಿಗೆ ಥಳಿಸಿದ್ದ ಶಿಕ್ಷಕ ಚೈಲ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದು, ಕೊಲೆ, ದಲಿತ ದೌರ್ಜನ್ಯ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಜಲೋರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರ್ಷವರ್ಧನ್ ಅಗರ್ವಾಲ್ ಹೇಳಿದ್ದಾರೆ.