ಬೆಂಗಳೂರು: ಚಾಮರಾಜನಗರದ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿರುವುದು ಕ್ಷಮೆಗೆ ಅರ್ಹವಲ್ಲದ ಘಟನೆಯಾಗಿದೆ. ಈ ಘಟನೆಗೆ ಸಚಿವರು ಮತ್ತು ಅಧಿಕಾರಿಗಳು ಹೊಣೆ ಹೊತ್ತುಕೊಳ್ಳಬೇಕು. ಆಕ್ಸಿಜನ್ ಸಮಸ್ಯೆಯಿಂದಾಗಿ ಈ ಘಟನೆ ಸಂಭವಿಸಿದ್ದರೆ ಸರ್ಕಾರವೇ ಹೊಣೆ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಚಾಮರಾಜನಗರದ ದುರಂತವನ್ನು ನೋಡಿದೆ. ಇದು ಘೋರ ಅನ್ಯಾಯ. ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಬೇರೆ ರಾಜ್ಯಗಳಲ್ಲಿ ಕೇಳಿ ಬರುತ್ತಿದ್ದ ಇಂತಹ ಘಟನೆ ನಮ್ಮ ರಾಜ್ಯದಲ್ಲೇ ನಡೆದಿರುವುದು ದುರಂತ. ಯಾರೇ ತಪ್ಪಿತಸ್ಥರಿದ್ದರೂ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ನನಗೆ ಘಟನೆ ಬಗ್ಗೆ ತಿಳಿದ ತಕ್ಷಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಇಂತಹ ಘಟನೆ ಮರುಕಳಿಸದಂತೆ ಎಲ್ಲಾ ಜಿಲ್ಲೆಯಲ್ಲೂ ಎಚ್ಚರ ವಹಿಸುವಂತೆ ಒತ್ತಾಯಿಸುತ್ತೇನೆ. ಬೇರೆ ಬೇರೆ ರಾಜ್ಯಗಳ ಘಟನೆ ನಮಗೆ ಪಾಠ ಆಗಬೇಕಿತ್ತು, ಆದರೆ ಅದು ಆಗಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಹೇಳಿದರು.