EPL; ಹ್ಯಾಟ್ರಿಕ್ ಗೋಲಿನ ಮೂಲಕ ವಿಶ್ವದಾಖಲೆ ನಿರ್ಮಿಸಿದ ಕ್ರಿಸ್ಟಿಯಾನೋ ರೊನಾಲ್ಡೊ

Prasthutha|

ಮ್ಯಾಂಚೆಸ್ಟರ್‌: ಇಂಗ್ಲಿಷ್ ಪ್ರೀಮಿಯರ್ ಲೀಗ್ ಫುಟ್ಬಾಲ್ ಟೂರ್ನಿಯ ಟೊಟೆನ್ಹ್ಯಾಮ್ ತಂಡದ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿದ ದೈತ್ಯ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ, ಆ ಮೂಲಕ ತಮ್ಮ ಗೋಲು ಗಳಿಕೆಯನ್ನು 807ಕ್ಕೆ ಏರಿಸಿಕೊಂಡಿದ್ದು, ಫುಟ್ಬಾಲ್ ಇತಿಹಾಸದಲ್ಲಿಯೇ ಕ್ಲಬ್ ಹಾಗೂ ದೇಶಕ್ಕಾಗಿ ಅತಿ ಹೆಚ್ಚು ಗೋಲು ಬಾರಿಸಿದ ಆಟಗಾರ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

- Advertisement -


ಮ್ಯಾಂಚೆಸ್ಟರ್‌ ಯುನೈಟೆಡ್‌ ತಂಡದ ತವರು ಮೈದಾನವಾದ ಓಲ್ಡ್ ಟ್ರಾಫರ್ಡ್’ನಲ್ಲಿ ನಡೆದ ಪಂದ್ಯದಲ್ಲಿ ರೊನಾಲ್ಡೊ ಪ್ರಥಮಾರ್ಧದ 12, 38ನೇ ನಿಮಿಷದಲ್ಲಿ ಹಾಗೂ ದ್ವಿತೀಯಾರ್ಧದ 81ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ತನ್ನ ತಂಡ 3-2 ಅಂತರದಿಂದ ಸ್ಮರಣೀಯ ಗೆಲುವು ದಾಖಲಿಸಲು ನೆರವಾದರು.
ಟೊಟೆನ್ಹ್ಯಾಮ್ ತಂಡಕ್ಕೆ 35ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಅವಕಾಶವನ್ನು ಹ್ಯಾರಿ ಕೇನ್ ಗೋಲಾಗಿ ಪರಿವರ್ತಿಸಿದರು. 72ನೇ ನಿಮಿಷದಲ್ಲಿ ಯುನೈಟೆಡ್ ತಂಡದ ಹ್ಯಾರಿ ಮಗ್ಯುರ್ ತನ್ನ ತಂಡದ ಗೋಲು ಬಲೆಯೊಳಗೆ ಚೆಂಡನ್ನು ತಳ್ಳುವ ಮೂಲಕ ಟೊಟೆನ್ಹ್ಯಾಮ್ ತಂಡಕ್ಕೆ ಗೋಲೊಂದನ್ನು ಉಡುಗೊರೆಯಾಗಿ ನೀಡಿದರು.
ಈ ಗೆಲುವಿನ ಮೂಲಕ ಟೂರ್ನಿಯಲ್ಲಿ 29 ಪಂದ್ಯಗಳಲ್ಲಿ 50 ಅಂಕಗಳನ್ನು ಕಲೆ ಹಾಕಿರುವ ಯುನೈಟೆಡ್ ನಾಲ್ಕನೇ ಸ್ಥಾನದಲ್ಲಿದ್ದು, ಚಾಂಪಿಯನ್ಸ್ ಲೀಗ್ ಟೂರ್ನಿಯ ಅರ್ಹತಾ ಸುತ್ತು ಪ್ರವೇಶಿಸುವ ಕನಸನ್ನು ಜೀವಂತವಾಗಿರಿಸಿದೆ.

Join Whatsapp