ಬೆಂಗಳೂರು: ಆಹಾರ ಧಾನ್ಯ ಹಾಗೂ ಪದಾರ್ಥಗಳಾದ ಅಕ್ಕಿ, ಗೋದಿ, ಬಾರ್ಲಿ, ಮಂಡಕ್ಕಿ, ಹಾಲು, ಮೊಸರು ಮುಂತಾದವುಗಳ ಮೇಲೆ ಒಕ್ಕೂಟ ಸರಕಾರ ಜಿ.ಎಸ್.ಟಿ. ಕರಭಾರ ಹೇರಿರುವುದನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸಿದೆ.
ಈ ಬಗ್ಗೆ ಮಾತನಾಡಿರುವ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಯು. ಬಸವರಾಜ, ಕಳೆದ ಮೂರು ವರ್ಷಗಳ ಕಾಲ ಕೋವಿಡ್ ಮತ್ತು ಅತೀವೃಷ್ಠಿ ಹಾಗೂ ಪ್ರವಾಹಗಳ ಕಾರಣದಿಂದ ನಲುಗಿ ಹೋಗಿರುವ ಜನತೆಯ ನೋವಿನ ಮೇಲೆ ಬರೆ ಎಳೆದಂತಾಗಿದೆ. ದೇಶದಾದ್ಯಂತ ಹಸಿವಿನ ಹಾಗೂ ಅಪೌಷ್ಠಿಕತೆಯ ಸಾವುಗಳು ತಲಾ ಐದು ಸೆಕೆಂಡ್ ಗೊಂದರಂತೆ ಸಂಭವಿಸುತ್ತಿರುವಾಗ ಜನತೆಯನ್ನು ಅಂತಹ ದುಸ್ಥಿತಿಯಿಂದ ಮೇಲೆತ್ತುವ ಕ್ರಮವಹಿಸಬೇಕಾದ ನರೇಂದ್ರ ಮೋದಿಯವರ ಒಕ್ಕೂಟ ಸರಕಾರದ ಈ ನಡೆ ಅಕ್ಷಮ್ಯವಾಗಿದೆ ಎಂದು ಹೇಳಿದರು.
ಇಂತಹ ದುರಿತ ಕಾಲದಲ್ಲೂ ಲಕ್ಷಾಂತರ ಕೋಟಿ ರೂಪಾಯಿ ಲೂಟಿ ಮಾಡಿ ಆದಾಯಗಳಿಸಿದ ಕಂಪನಿಗಳ ಮೇಲೆ ತೆರಿಗೆ ಹೇರಿ ಆದಾಯ ಗಳಿಸದೇ, ಈ ಸರಕಾರ ಅವುಗಳ ದಶ ಲಕ್ಷಾಂತರ ಕೋಟಿ ರೂಪಾಯಿಗಳ ಬಾಕಿ ತೆರಿಗೆ ಮನ್ನಾ ಮಾಡಿ ಲೂಟಿಕೋರ ಕಾರ್ಪೋರೇಟ್ ಕಂಪನಿಗಳಿಗೆ ನೆರವು ನೀಡುತ್ತಿದೆ. ಈ ಕೂಡಲೇ ಈ ತೆರಿಗೆ ಭಾರವನ್ನು ವಾಪಾಸು ಪಡೆಯುವಂತೆ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿ ಪ್ರಧಾನ ಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ ಎಂದು ತಿಳಿಸಿದರು.