ಈಶ್ವರಪ್ಪ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ-ಬಂಧಿಸಲು ಸಿಪಿಐ(ಎಂ) ಆಗ್ರಹ

Prasthutha|

ಬೆಂಗಳೂರು: ಬೆಳಗಾವಿಯ ಗುತ್ತಿಗೆದಾರ ಹಾಗೂ ಬಿಜೆಪಿ ಕಾರ್ಯಕರ್ತ ಸಂತೋಷ ಪಾಟೀಲ್  ಸಾವು  ಅತ್ಯಂತ ಗಂಭೀರ ಪ್ರಕರಣವಾಗಿದ್ದು, ರಾಜ್ಯ ಸರಕಾರ ಕೂಡಲೇ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಅವರನ್ನು ಬಂಧಿಸಬೇಕು ಎಂದು ಭಾರತ ಕಮ್ಯುನಿಸ್ಟ್ ಪಕ್ಷ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.

- Advertisement -

ಪ್ರತಿಯೊಂದು ಗುತ್ತಿಗೆ ಕೆಲಸದಲ್ಲಿ ರಾಜ್ಯ ಸರಕಾರದ ಸಚಿವರು, ಶಾಸಕರು, ಅಧಿಕಾರಿಗಳು, ಒಟ್ಟು ಕಾಮಗಾರಿಯ ಶೇ 40 ರಷ್ಟು ಕಮಿಷನ್ ಪಡೆಯುತ್ತಿದ್ದಾರೆ. ಇದರಿಂದ ಕಾಮಗಾರಿ ನಿರ್ವಹಣೆಗೆ, ಗುತ್ತಿಗೆದಾರರಿಗೆ ತೀವ್ರ ತೊಂದರೆಯಾಗುತ್ತಿದ್ದು, ಆದ್ದರಿಂದ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸ್ವತಃ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘವು ದೇಶದ ಪ್ರಧಾನ ಮಂತ್ರಿಗಳಿಗೆ ಬಹಿರಂಗ ಪತ್ರ ಬರೆದಿತ್ತು. ಈ ವೇಳೆ ಸಿಪಿಐ(ಎಂ) ಪಕ್ಷವು ಈ ಪ್ರಕರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಮತ್ತು ಕಾಮಗಾರಿಗಳ ಕಳಪೆತನವನ್ನು ಹಾಗೂ ಕಾಮಗಾರಿಗಳು ನಡೆಯದೇ ಬಿಲ್ ಮಾಡುವುದನ್ನು ತಡೆಯುವಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿತ್ತು.

ಪ್ರಧಾನ ಮಂತ್ರಿಗಳು ಮತ್ತು ಮುಖ್ಯಮಂತ್ರಿಗಳು ಆ ಕುರಿತು ಸೂಕ್ತ ಕ್ರಮವಹಿಸಿದ್ದಲ್ಲಿ  ಗುತ್ತಿಗೆ ಸೇವೆಯನ್ನು ಒದಗಿಸುತ್ತಿದ್ದ ಸಂತೋಷ ಪಾಟೀಲ್ ಎಂಬವರು ನೊಂದು ಆತ್ಮಹತ್ಯೆ ಮಾಡಿಕೊಳ್ಳುವುದನ್ನು ತಡೆಯಬಹುದಿತ್ತು, ಇದರಿಂದಾಗಿ ಅವರ ಕುಟುಂಬ ಅನಾಥವಾಗುವುದನ್ನು ತಡೆಯಬಹುದಾಗಿತ್ತು.  ಈ ಕುರಿತು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳದೇ ಜವಾಬ್ದಾರಿ ಹೀನ ರೀತಿಯ ವರ್ತನೆ ತೋರಿದುದು ತೀವ್ರ ಖಂಡನೀಯವಾಗಿದೆ  ಎಂದು ಹೇಳಿದೆ.

- Advertisement -

ಇನ್ನಾದರೂ ಇತರ ಗುತ್ತಿಗೆದಾರರು ಅತ್ಮಹತ್ಯೆಗಿಳಿಯದಂತೆ ಮತ್ತು ಅವರ ಕುಟುಂಬಗಳು ಬೀದಿಪಾಲಾಗದಂತೆ ತಡೆಯಲು ಸಂತೋಷ ಪಾಟೀಲ ಪ್ರಕರಣವೂ ಸೇರಿದಂತೆ ಒಟ್ಟು ಈ ಕಮಿಷನ್ ಹಗರಣವನ್ನು ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸುವಂತೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಸರಕಾರಗಳನ್ನು ಒತ್ತಾಯಿಸಿದೆ.

Join Whatsapp