ಮಂಗಳೂರು: ಬೆಲೆಯೇರಿಕೆ ವಿರುದ್ಧ ದೇಶಾದ್ಯಂತ ಪ್ರತಿಭಟನೆಗೆ ಸಿಪಿಐ- ಭಾರತೀಯ ಕಮ್ಯುನಿಸ್ಟ್ ಪಕ್ಷ ಕರೆ ನೀಡಿದ್ದು, ಇದರ ಭಾಗವಾಗಿ ಮಂಗಳೂರಿನಲ್ಲೂ ಜಿಲ್ಲಾ ಘಟಕದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಭಾರತ ಕಮ್ಯುನಿಸ್ಟ್ ಪಕ್ಷ (ಸಿಪಿಐ)ದ ದ.ಕ ಮತ್ತು ಉಡುಪಿ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಮಾತನಾಡಿ, ಯಾವುದೇ ನಿಯಂತ್ರಣವಿಲ್ಲದೆ ಜೀವನಾವಶ್ಯಕ ವಸ್ತು ಮತ್ತು ಸೇವೆಗಳ ಬೆಲೆ ಏರಿಸಿ ಜನರನ್ನು ಶೋಷಿಸಲಾಗುತ್ತಿದೆ. ಬೆಲೆಯೇರಿಕೆಯನ್ನು ತಗ್ಗಿಸುತ್ತೇವೆಂದು ಅಧಿಕಾರಕ್ಕೆ ಬಂದ ಬಿಜೆಪಿ ಕೊಟ್ಟ ಮಾತಿಗೆ ತಪ್ಪಿದೆ. ತನ್ನದು ದೇಶ ಭಕ್ತಿಯೆಂಬುದು ಬರೀ ಬೊಗಳೆ, ಬಿಜೆಪಿಯದ್ದು ಬೆಲೆ ಏರಿಸುವ ಭಕ್ತಿ ಎಂದು ವಾಗ್ದಾಳಿ ನಡೆಸಿದರು.
ಭಾರತವನ್ನು ವಿಶ್ವಗುರುವನ್ನಾಗಿ ಮಾಡುತ್ತೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ಕೇಂದ್ರದ ಮೋದಿ ಸರಕಾರ ನಕಾರಾತ್ಮಕವಾದ ವಿಶ್ವಗುರು ಆಗುತ್ತಿದೆ. ಆರೋಗ್ಯ ಕ್ಷೇತ್ರದ ಕಳಪೆಗೆ 182 ದೇಶಗಳಲ್ಲಿ 142ನೇ ಸ್ಥಾನದಲ್ಲಿದೆ. ಹಸಿವಿನ ಸೂಚ್ಯಂಕದಲ್ಲಿ 116 ರಲ್ಲಿ 101 ನೇ ಸ್ಥಾನಕ್ಕೆ ಬಂದಿದೆ. ಮಕ್ಕಳ ಮರಣ ಏರುತ್ತಿದ್ದು ಪ್ರತೀ ವರ್ಷ 5.26 ಲಕ್ಷ ಮಕ್ಕಳು ಸಾಯುತ್ತಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ ಎಂದು ಅಂಜಿ ಅಧಿವೇಶನದ ಸಮಯವನ್ನು ಮೊಟಕುಗೊಳಿಸಲಾಗಿದೆ. ಜನರ ಮೂಲಭೂತ ಸಮಸ್ಯೆಗಳನ್ನು ಮರೆಮಾಚಲು ಧರ್ಮವನ್ನು ರಾಜಕೀಯಕ್ಕೆ ಬಳಸಿ ಭಾವನಾತ್ಮಕ ವಿಚಾರದಲ್ಲಿ ಜನರೊಳಗೆ ವಿಘಟನೆ ತರುತ್ತಿರುವುದು ಈ ಸರಕಾರದ ಹವ್ಯಾಸವಾಗಿದೆ ಎಂದು ಅವರು ಆಪಾದಿಸಿದರು.
ಕಟ್ಟಡ ಕಾರ್ಮಿಕರ ಜಿಲ್ಲಾ ನಾಯಕರಾದ ಎಂ. ಕರುಣಾಕರ್ ಮಾತನಾಡಿ, 2014 ರಲ್ಲಿ ಅಧಿಕಾರ ಹಿಡಿಯುವಾಗ ನಮಿಸಿದ್ದು ಯಾರಿಗೆ ಈ ನಾಡಿನ ಜನತೆಗೆಯೋ ಅಥವಾ ಬಂಡವಾಳ ಶಾಹಿಗಳಿಗೋ ? ಕಳೆದ ಪಂಚ ರಾಜ್ಯಗಳ ಚುನಾವಣಾ ಸಂದರ್ಭದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಸಲಾಗಿಲ್ಲ. ಚುನಾವಣೆ ಕಳೆದ ಕೂಡಲೇ ಒಂದೇ ಸಮನೆ ದರ ಹೆಚ್ಚಿಸಲಾಯಿತು. ಬೆಲೆ ಇಳಿಸುತ್ತೇವೆಂದವರು ಅಧಿಕಾರಕ್ಕೆ ಬಂದ ನಂತರ ಏರಿಸಿದರು. ಈ ಸುಳ್ಳುಕೋರ, ಬಡಾಯಿಕೋರ ಸರಕಾರ ಕೂಡಲೇ ಕೆಳಗಿಳಿಯಬೇಕೆಂದು ಒತ್ತಾಯಿಸಿದರು.
ವಿ.ಎಸ್. ಬೇರಿಂಜ ಸ್ವಾಗತಿಸಿದರೆ, ಎಐವೈಎಫ್ ತಾಲೂಕು ಕಾರ್ಯದರ್ಶಿ ಜಗತ್ಪಾಲ್ ಕೋಡಿಕಲ್ ವಂದಿಸಿದರು. ಆರ್.ಡಿ ಸೋನ್ಸ್, ಭುಜಂಗ ಕೋಡಿಕಲ್, ಸುಧಾಕರ್ ಕಲ್ಲೂರು, ಕೃಷ್ಣಪ್ಪ ವಾಮಂಜೂರು, ದಿನೇಶ್ ಕಾಯರ್‍ಮಾರ್, ಸುಲೋಚನಾ ಕವತ್ತಾರು, ಸಂಜೀವಿ ಹಳೆಯಂಗಡಿ ಮೊದಲಾದವರು ನೇತೃತ್ವ ವಹಿಸಿದರು.