ಮಂಡ್ಯ: ಜಿಲ್ಲೆಯಲ್ಲಿ ಚಿರತೆ ದಾಳಿ ಮುಂದುವರಿದಿದ್ದು,ಮಳವಳ್ಳಿ ತಾಲೂಕಿನ ಬ್ಲಫ್ ಬಳಿ ಚಿರತೆ ಹಸುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಹಸುವನ್ನು ಕಳೆದುಕೊಂಡ ಮಾಲೀಕ ಕಣ್ಣೀರು ಸುರಿಸುತ್ತಿದ್ದಾರೆ. ತಾಲೂಕಿನಲ್ಲಿ ಚಿರತೆ ಪದೇ ಪದೇ ಕಾಣಿಸಿಕೊಳ್ಳುತ್ತಿದ್ದು, ಸಹಜವಾಗಿ ಜನರಲ್ಲಿನ ಆತಂಕವನ್ನು ಹೆಚ್ಚಿಸಿದೆ. ಮಳವಳ್ಳಿ ತಾಲೂಕಿನ ಬ್ಲಫ್ ಬಳಿಯ ನಂಜಪ್ಪ ಎಂಬವರು ಸಾಕಿದ ಹಸುವಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದೆ. ಸದ್ಯ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಗ್ರಾಮದಲ್ಲಿ ಕತ್ತಲಾದರೆ ಸಾಕು ಜನರು ಒಂಟಿಯಾಗಿ ಓಡಾಡಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅರಣ್ಯ ಇಲಾಖೆ ಬಳಿ ಸಮರ್ಪಕ ಬೋನು ಇಲ್ಲದೆ ಇರುವ ಹಿನ್ನೆಲೆ ಚಿರತೆಗಳು ಸೆರೆಯಾಗದೆ ಎಲ್ಲೆಂದರಲ್ಲಿ ದಾಳಿ ನಡೆಸುತ್ತಿದೆ. ಚಿರತೆ ಪ್ರತ್ಯಕ್ಷಗೊಂಡ ಸ್ಥಳದಲ್ಲಿ ಬೋನ್ ಅಳವಡಿಸಿ ಅನಾಹುತಕ್ಕೆ ಕಡಿವಾಣ ಹಾಕಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.