ಇತ್ತೀಚೆಗೆ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಣಿಪುರದ ಬಿಜೆಪಿ ಮುಖ್ಯಸ್ಥ ಎಸ್.ಟಿಕೇಂದ್ರ ಸಿಂಗ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಹಾಸ್ಯ ಮಾಡಿದ್ದಾರೆ ಎಂದು ಆರೋಪಿಸಿ ಪತ್ರಕರ್ತ ಕಿಶೋರ್‌ಚಂದ್ರ ವಾಂಗ್ಖೇಮ್ ಮತ್ತು ಸಾಮಾಜಿಕ ಹೋರಾಟಗಾರ ಎರೆಂಡ್ರೊ ಲೈಚೋಂಬಮ್ ವಿರುದ್ಧ ಮಣಿಪುರ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ(NSA) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಇಬ್ಬರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಟೀಕೇಂದ್ರ ಅವರ ಸಾವಿಗೆ ಸಂತಾಪ ಸೂಚಿಸುತ್ತಾ ‘ಗೋ ಮೂತ್ರ, ಸೆಗಣಿ ಕೋವಿಡ್ ಸೋಂಕಿಗೆ ಪರಿಹಾರವಲ್ಲ’ ಎಂದು ಬರೆದಿದ್ದು, ಈ ಬಗ್ಗೆ ಬಿಜೆಪಿಯ ರಾಜ್ಯ ಉಪಾಧ್ಯಕ್ಷ ಉಷಮ್ ದೇಬನ್ ಸಿಂಗ್ ಮತ್ತು ಪ್ರಧಾನ ಕಾರ್ಯದರ್ಶಿ ಪಿ. ಪ್ರೇಮಾನಂದ ಮೀಟೆಯವರು ವಾಂಗ್ಖೇಮ್ ಮತ್ತು ಲೈಚೋಂಬಮ್ ವಿರುದ್ಧ ದೂರು ದಾಖಲಿಸಿದ್ದು ನಂತರ ಈ ಇಬ್ಬರನ್ನೂ ಪೊಲೀಸರು ಗುರುವಾರ ಬಂಧಿಸಿದ್ದರು.
ನಂತರ ಇಬ್ಬರೂ ಸೋಮವಾರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದರು. ಆದರೆ ಇದರ ನಂತರ ಸರ್ಕಾರವು ಅವರ ವಿರುದ್ದ NSA ಅಡಿಯಲ್ಲಿ ಪ್ರಕರಣ ದಾಖಲಿಸಿದೆ ಎಂದು ತಿಳಿದು ಬಂದಿದೆ.
ಸರ್ಕಾರವನ್ನು ಟೀಕಿಸಿದ್ದಾರೆಂದು ದೇಶದ್ರೋಹದ ಆರೋಪದ ಮೇಲೆ ಈ ಹಿಂದೆ ಕೂಡಾ ವಾಂಗ್ಖೇಮ್ ಮತ್ತು ಲೈಚೋಂಬಮ್ ಅವರು ಎರಡು ಬಾರಿ ಬಂಧಿತರಾಗಿದ್ದರು.