ಬೆಂಗಳೂರು : ದೇಶದಾದ್ಯಂತ ಕೊರೋನಾ ಸೋಂಕು ತೀವ್ರವಾಗಿ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲೂ ಸೋಂಕಿನಿಂದ ಜನತೆ ಕಂಗೆಟ್ಟು ಹೋಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಕೋವಿಡ್ ಮರಣ ಸಂಭವಿಸಿದ ರಾಜ್ಯಗಳ ಪಟ್ಟಿಯಲ್ಲಿ ದೆಹಲಿಯನ್ನು ಹಿಂದಿಕ್ಕಿದ ಕರ್ನಾಟಕ 2 ನೇ ಸ್ಥಾನಕ್ಕೇರಿದೆ.
ಕರ್ನಾಟಕದಲ್ಲಿ ಮರಣ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೇ ತಿಂಗಳ 17 ದಿನಗಳಲ್ಲಿಯೇ 6,790 ಮಂದಿ ಸೋಂಕಿತರು ರಾಜ್ಯದಲ್ಲಿ ಬಲಿಯಾಗಿದ್ದಾರೆ. ಈ ಮೂಲಕ ಮೊದಲ ಅಲೆಯಲ್ಲಿ ಭಾರಿ ಸಾವಿನ ಸಂಖ್ಯೆಯನ್ನು ಕಂಡಿದ್ದ ದೆಹಲಿಯನ್ನು ಹಿಂದಿಕ್ಕಿ ಕರ್ನಾಟಕ ಎರಡನೇ ಸ್ಥಾನಕ್ಕೇರಿದೆ.
ಮೇ. 17 ರವರ ವೇಳೆಗೆ ಕರ್ನಾಟಕದಲ್ಲಿ 22,313 ಕೋವಿಡ್ ಸಾವುಗಳು ವರದಿಯಾಗಿದ್ದು, ದೆಹಲಿಯಲ್ಲಿ 21,846 ಮಂದಿ ಸೋಂಕಿನಿಂದ ಇದುವರೆಗೆ ಮೃತಪಟ್ಟಿದ್ದಾರೆ. ಇನ್ನು ದೇಶದಲ್ಲಿ ಅತಿ ಹೆಚ್ಚು ಕೊವಿಡ್ ಮರಣ ಸಂಭವಿಸಿರುವ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದು, ಮಹಾರಾಷ್ಟ್ರದಲ್ಲಿ ಈವರೆಗೆ 82,486 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.