ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಬೃಹತ್ ಧಾರ್ಮಿಕ ಸಭೆ ನಡೆಸಿದ ಶ್ರೀಲಂಕಾದ ಹಿಂದೂ ದೇವಾಲಯ | ದೇಗುಲ ಅಧಿಕಾರಿಗಳ ಬಂಧನ

Prasthutha|

ಕೊಲಂಬೊ: ದೇಶದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ನಡುವೆಯೇ ಶ್ರೀಲಂಕಾದ ಹಿಂದೂ ದೇವಾಲಯವೊಂದು ಸರಕಾರದ ನಿಯಮಗಳನ್ನು ಉಲ್ಲಂಘಿಸಿ ದೊಡ್ಡ ಮಟ್ಟದ ಪ್ರಾರ್ಥನಾ ಸಭೆ ನಡೆಸಿದೆ. ಈ ಕುರಿತು ಕ್ರಮ ಕೈಗೊಂಡಿರುವ ಅಲ್ಲಿನ ಆಡಳಿತ ದೇಗುಲದ ಅಧಿಕಾರಿಗಳನ್ನು ಬಂಧಿಸಿದ್ದಾರೆ.

- Advertisement -

ತಮಿಳರು ಹೆಚ್ಚಿನ ಪ್ರಾಬಲ್ಯ ಹೊಂದಿರುವ ಜಾಫ್ನಾದ ಶ್ರೀ ಕಾಮಾಕ್ಷಿ ಅಮ್ಮನ್ ದೇವಸ್ಥಾನದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದೆ ಮತ್ತು ಮಾಸ್ಕ್ ಗಳನ್ನು ಧರಿಸದೆ ಅಪಾರ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಈ ಕಾರಣಕ್ಕಾಗಿ ದೇಗುಲದ ಉನ್ನತಾಧಿಕಾರಿಗಳನ್ನು ಬಂಧಿಸಲಾಗಿದೆ ಎಂದು ಶ್ರೀಲಂಕಾ ಮಾಧ್ಯಮಗಳು ವರದಿ ಮಾಡಿವೆ. 

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಕ್ರಮವನ್ನು ನಡೆಸಿದ್ದಕ್ಕಾಗಿ ದೇವಾಲಯದ ಟ್ರಸ್ಟಿಗಳ ಮಂಡಳಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಲಂಕಾದಲ್ಲಿ ಕೊರೋನಾ ಸೋಂಕಿನ ತೀವ್ರ ಹೆಚ್ಚಳದಿಂದಾಗಿ ಸರ್ಕಾರ 3ನೇ ಹಂತದ ನಿರ್ಬಂಧನೆಗಳನ್ನು ಹೇರಿದೆ. ಅದರಂತೆ ಮೇ 31ರವರೆಗೂ ಬೃಹತ್ ಸಮಾವೇಶ ನಡೆಸುವುದನ್ನು ನಿಷೇಧಿಸಿದೆ. ಶಾಲೆಗಳನ್ನು ಮುಚ್ಚಲಾಗಿದ್ದು, ರಾಜಕೀಯ ಪ್ರಚಾರಗಳನ್ನು ನಿಷೇಧಿಸಿದೆ. ಕ್ಯಾಸಿನೊಗಳು, ನೈಟ್ ಕ್ಲಬ್‌ಗಳು ಮತ್ತು ಬೀಚ್ ಪಾರ್ಟಿಗಳನ್ನು ನೂತನ ಮಾರ್ಗಸೂಚಿಗಳ ಅನ್ವಯ ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಿಗೆ ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ತಿಳಿಸಲಾಗಿದ್ದು, ಇತರರಿಗೆ  ವರ್ಕ್ ಫ್ರಂ ಹೋಮ್ ಮಾಡುವಂತೆ ಸೂಚಿಸಲಾಗಿದೆ. 

Join Whatsapp