ಬಿಜೆಪಿ ಸಂಸದ ನಳಿನ್ ಕುಮಾರ್ ರಿಂದಲೇ ಕೋವಿಡ್ ರೂಲ್ಸ್ ಬ್ರೇಕ್ | ಬಿಜೆಪಿ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗಿ

Prasthutha|

►ಬಿಜೆಪಿಯ ರಾಜಕೀಯ ಕಾರ್ಯಕ್ರಮಕ್ಕೆ ಸರ್ಕಾರಿ ಶಾಲೆ ಬಳಕೆ !
ಲಾಕ್ ಡೌನ್ ನಿರ್ಬಂಧದ ಮಧ್ಯೆಯೇ ಮೋದಿ 7 ವರ್ಷ ಪೂರೈಸಿದ ಕಾರ್ಯಕ್ರಮ !

- Advertisement -

ಮಂಗಳೂರು : ಲಾಕ್ ಡೌನ್ ನಿರ್ಬಂಧಗಳು ಮತ್ತು ನಿಯಮಾವಳಿಗಳು ಕೇವಲ ಜನ ಸಾಮಾನ್ಯರಿಗೆ ಮಾತ್ರ ಎಂಬಂತಾಗಿದೆ ಎನ್ನುವುದು ಹಿಂದಿನಿಂದಲೂ ಕೇಳಿ ಬರುತ್ತಿರುವ ಮಾತು. ಕಾನೂನುಗಳನ್ನು ಪಾಲಿಸುವಲ್ಲಿ ಜನಸಾಮಾನ್ಯರಿಗೆ ಒಂದು ನ್ಯಾಯ ರಾಜಕೀಯ ನಾಯಕರಿಗೆ ಮತ್ತೊಂದು ನ್ಯಾಯ ಎಂಬಂತಾಗಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮಂಗಳೂರು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್  ಅವರ ನೇತೃತ್ವದಲ್ಲಿ ಮೋದಿ ಅಧಿಕಾರವಧಿ 7 ವರ್ಷ ಪೂರೈಸಿದ ಕಾರ್ಯಕ್ರಮವನ್ನು ಮಂಗಳೂರಿನಲ್ಲಿ ಹಮ್ಮಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಬಿಜೆಪಿ ಕಾರ್ಯಕರ್ತರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿರುವುದು ಈಗ ಜನಸಾಮಾನ್ಯರ ಕೆಂಗಣ್ಣಿಗೆ ಗುರಿಯಾಗಿದೆ.

ಕೋವಿಡ್ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರ್ಕಾರ ಲಾಕ್ ಡೌನ್ ಘೋಷಿಸಿ ಎಲ್ಲಾ ಸಾರ್ವಜನಿಕ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸಿದ್ದರೂ, ಅದು ಸಂಸದ ನಳಿನ್ ಕುಮಾರ್ ಅವರ ಪಕ್ಷದ ಕಾರ್ಯಕ್ರಮಕ್ಕೆ ಯಾವುದೇ ತಡೆಯಾಗಲಿಲ್ಲ. ಮಂಗಳೂರಿನ ಗಾಂಧಿನಗರ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್  ಕಟೀಲ್ ಅವರು ನರೇಂದ್ರ ಮೋದಿ ಸರ್ಕಾರ ಏಳು ವರ್ಷ ಪೂರ್ತಿಗೊಳಿಸಿದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಸ್ಥಳೀಯ ಮುಖಂಡರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

- Advertisement -

ಲಾಕ್ ಡೌನ್ ನಿಯಮಾವಳಿಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ನಡೆಸಿದ ಸಂಸದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಶಾಲೆಗಳಿಗೆ ರಜೆಯಿರುವ ವೇಳೆ ಒಂದು ಪಕ್ಷದ ಕಾರ್ಯಕ್ರಮ ನಡೆಸಲು ಶಾಲಾ ಅಭಿವೃದ್ಧಿ ಮಂಡಳಿ ಹೇಗೆ ಶಾಲೆಯಲ್ಲಿ ಹೇಗೆ ಅನುಮತಿ ನೀಡಿತು ಎನ್ನುವುದು ಕೂಡಾ ಇಲ್ಲಿ ಪಶ್ನಾರ್ಹವಾಗಿದೆ. ಮುಂದೆ ಇದೇ ಶಾಲೆಯಲ್ಲಿ ಮತ್ತೊಂದು ಪಕ್ಷ ತನ್ನ ಕಾರ್ಯಕ್ರಮ ನಡೆಸಲು ಅನುಮತಿ ಕೇಳಿದರೆ ಅವರ ನಡೆಯೇನು ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.



Join Whatsapp