ಸೋಶಿಯಲ್ ಇಖ್ವಾ ಫೆಡರೇಶನ್ ಮಾಣಿ ವತಿಯಿಂದ ಕಡೇಶ್ವಾಲ್ಯ, ಬಾಳ್ತಿಲ, ನೆಟ್ಲಮುಡ್ನೂರು, ಪೆರಾಜೆ ,ಮಾಣಿ ಮತ್ತು ಕೆದಿಲ ಗ್ರಾಮಗಳ ಆಯ್ದ ಸದಸ್ಯರಿಗೆ ಕೋವಿಡ್ ತಡೆಗಟ್ಟುವ ಬಗ್ಗೆ ಮುಂಜಾಗೃತಾ ತರಬೇತಿ ಶಿಬಿರ ನೇರಳಕಟ್ಟೆ ಇಂಡಿಯನ್ ಅಡಿಟೋರಿಯಂ ನಲ್ಲಿ ನಡೆಯಿತು.ಕಾರ್ಯಕ್ರಮವನ್ನು SIF ಅಧ್ಯಕ್ಷರಾದ ಅಬ್ದುಲ್ ರಹೀಂ ನಾಲ್ಕು ಗ್ರಾಮಗಳ ಮುಖ್ಯಸ್ಥರಿಗೆ ನಾಲ್ಕು ಆಕ್ಸೀಮೀಟರ್ ಹಂಚುವುದರೊಂದಿಗೆ ಸಾಂಕೇತಿಕವಾಗಿ ಉದ್ಘಾಟಿಸಿದರು.
PFI ದ.ಕ.ಜಿಲ್ಲಾ ಕೋವಿಡ್ ವಾರಿಯರ್ಸ್ ನಿರ್ದೇಶಕರಾದ ಅಬ್ದುಲ್ ಖಾದರ್ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣದ ಸವಾಲು ಮತ್ತು ಪರಿಹಾರದ ಬಗ್ಗೆ ವಿಸ್ತ್ರತವಾಗಿ ಮಾತನಾಡಿದರು. ಡಾಕ್ಟರ್ ಶಾಕಿರಾ ಸಲೀಂ ಆತೂರು ಕೋವಿಡ್ ಬಗ್ಗೆ ಹೆಚ್ಚುತ್ತಿರುವ ತಪ್ಪು ಕಲ್ಪನೆಗಳು ಜನಸಾಮಾನ್ಯರ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಎಚ್ಚರಿಸಿದರು.ಇದೇ ವೇಳೆ SIF ಸಂಘಟನೆಯು ಇದರ ನಿವಾರಣೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕೈಗೊಳ್ಳುತ್ತಿರುವ ಯೋಜನೆಗಳನ್ನು ಶ್ಲಾಘಿಸಿದರು.ಪುಣಚ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾಕ್ಟರ್ ರಂಶೀಲಾ ಶಫೀಕ್ ಮಾತನಾಡಿ ಕೋವಿಡ್ ಲಸಿಕೆ ಪಡೆಯುವಲ್ಲಿ ಹಿಂಜರಿಯುತ್ತಿರುವ ಜನಸಾಮಾನ್ಯರ ತಪ್ಪಕಲ್ಪನೆಗಳನ್ನು ಪರಿಹರಿಸುವಲ್ಲಿ ಎಲ್ಲಾ ಸಂಘ-ಸಂಸ್ಥೆಗಳು ಕಾರ್ಯ ಪ್ರವೃತ್ತರಾಗಬೇಕೆಂದು ಸಲಹೆ ನೀಡಿದರು.
SIF ಗೌರವ ಸಲಹೆಗಾರರಾದ ಹನೀಫ್ ಖಾನ್ ಕೊಡಾಜೆ ಮಾತನಾಡಿ ಕೋವಿಡ್ ವಿರುದ್ಧ ಹೋರಾಟ ನಡೆಸುವುದು ಅತ್ಯಂತ ಪವಿತ್ರ ಕೆಲಸ.ಯುವಕರು ಇಂತಹ ಸಾಮಾಜಿಕ ಸೇವೆ ಸಲ್ಲಿಸುವಾಗ ತಮ್ಮಲ್ಲಿರುವ ಸಂಘಟನತಾ ಭಿನ್ನತೆಯನ್ನು ಮರೆತು ಸಮಾಜದಲ್ಲಿ ಪ್ರತಿಯೊಬ್ಬರ ನೋವಿಗೆ ಸಮಾನವಾಗಿ ಸ್ಪಂಧಿಸಬೇಕೆಂದು ವಿನಂತಿಸಿದರು. SIF ಪ್ರಧಾನ ಕಾರ್ಯದರ್ಶಿ ಜೈನುಲ್ ಅಕ್ಬರ್ ಪ್ರಸ್ತಾವನೆಗೈದು ಸ್ವಾಗತಿಸಿದರು. ಬಾಶಿತ್ ಬುಡೋಳಿ ನಿರೂಪಿಸಿ ರಿಯಾಝ್ ಕಲ್ಲಾಜೆ ವಂದಿಸಿದರು.