ಮೈಸೂರು: ಮೈಸೂರಿನಲ್ಲಿ ಕೋವಿಡ್ ಪ್ರಕರಣ ಸಂಬಂಧ ನಾಳೆ ಸಭೆ ಕರೆದಿದ್ದೇನೆ. ಪ್ರವಾಸಿ ತಾಣಗಳು ಸೇರಿದಂತೆ ಹೆಚ್ಚು ಮಂದಿ ಸೇರುವ ಸ್ಥಳಗಳಲ್ಲಿ ಯಾವ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು? ಕೋವಿಡ್ ಪ್ರಕರಣವನ್ನು ಹೇಗೆ ಹತೋಟಿಗೆ ತರಬಹುದು ಎಂಬಿತ್ಯಾದಿಗಳ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಿರ್ವಹಣೆ ಬಗ್ಗೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಹಾಲಿ ಕೋವಿಡ್ ಹಾಗೂ ಪ್ರವಾಹ ಪರಿಸ್ಥಿತಿಗಳನ್ನು ನಿಭಾಯಿಸಲು ಸಚಿವರಿಗೆ ಜಿಲ್ಲೆಗಳ ಜವಾಬ್ದಾರಿಯನ್ನು ವಹಿಸಿದ್ದಾರೆ. ಹಾಲಿ ನನಗೆ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳ ಪರಿಸ್ಥಿತಿಯನ್ನು ನಿಭಾಯಿಸುವ ಹೊಣೆ ನೀಡಲಾಗಿದ್ದು, ಆ ನಿಟ್ಟಿನಲ್ಲಿ ಕ್ರಮವಹಿಸುತ್ತಿದ್ದೇನೆ. ಇಂದು ಚಾಮರಾಜನಗರದಲ್ಲಿ ಸಭೆ ನಡೆಸುತ್ತಿದ್ದು, ನಾಳೆ ಮೈಸೂರಿನಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದೆ. ಇಲ್ಲಿ ಸಂಪೂರ್ಣ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಕಳೆದೊಂದು ವರ್ಷದಿಂದ ಕೋವಿಡ್ ಇದ್ದು, ಅದರ ಜೊತೆಗೆ ಜೀವನ ನಡೆಸಬೇಕಿದೆ. ಹೀಗಾಗಿ ಜನರಿಗೆ ಹಾಗೂ ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ, ಸೋಂಕು ಹರಡದಂತೆ ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ಸಚಿವರಾದ ಸೋಮಶೇಖರ್ ಅವರು ತಿಳಿಸಿದರು.
ರಾಜಕೀಯ ದಾಳಿ ಅಲ್ಲ
ಶಾಸಕ ಜಮೀರ್ ಅಹ್ಮದ್ ಹಾಗೂ ಮಾಜಿ ಸಚಿವರಾದ ರೋಷನ್ ಬೇಗ್ ಅವರ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ ಅಲ್ಲ. ಅಧಿಕಾರಿಗಳು ಕೇಳಿದ ದಾಖಲೆಗಳನ್ನು ಕೊಟ್ಟರೆ ಸಮಸ್ಯೆಯಾಗುವುದಿಲ್ಲ. ಇನ್ನು ಈ ದಾಳಿಯನ್ನು ಬಿಜೆಪಿ ಮಾಡಿಸಿದೆ ಎಂಬ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷ ನಾಯಕರಾದ ಸಿದ್ದರಾಮಯ್ಯ ಅವರ ಆರೋಪದಲ್ಲಿ ಹುರುಳಿಲ್ಲ. ನಾನೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿಕೆ ಕೊಡುತ್ತಿರುವ ಸಿದ್ದರಾಮಯ್ಯ ಅವರ ಬಗ್ಗೆ ಡಿ.ಕೆ.ಶಿವಕುಮಾರ್ ಗೆ ಅಸಮಾಧಾನವಿರಬಹುದು. ಹಾಗಾಗಿ ಅವರ ಆಪ್ತರ ಮನೆ ಮೇಲೆ ಡಿಕೆಶಿಯವರೇ ಮಾಹಿತಿ ಕೊಟ್ಟು ದಾಳಿ ಮಾಡಿಸಿರಬಹುದು ಎಂದು ಪ್ರಶ್ನೆಯೊಂದಕ್ಕೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.
ಯಾವ ಖಾತೆ ಕೊಟ್ಟರೂ ಸರಿ
ಸಹಕಾರ ಖಾತೆಯನ್ನೇ ಕೇಳಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರಾದ ಸೋಮಶೇಖರ್ ಅವರು, ನಾನು ಸಚಿವ ಸ್ಥಾನಕ್ಕಾಗಿ ಎಲ್ಲೂ ಲಾಬಿ ಮಾಡಿಲ್ಲ. ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರ ಸರ್ಕಾರದಲ್ಲಿ ಒಂದು ವರ್ಷ ಸಚಿವನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಆ ಹಿನ್ನೆಲೆಯಲ್ಲಿ ಈಗ ಸಚಿವ ಸ್ಥಾನ ನೀಡಿದ್ದಾರೆ. ಇಂಥದ್ದೇ ಖಾತೆ ಕೊಡಿ ಎಂದು ನಾನು ಕೇಳುವುದಿಲ್ಲ. ಯಾವುದೇ ಖಾತೆ ಕೊಟ್ಟರೂ ನಿಭಾಯಿಸುತ್ತೇನೆ. ಒಂದು ವೇಳೆ, ನನ್ನನ್ನೇ ಕೇಳಿದರೆ ಬೆಂಗಳೂರು ಅಭಿವೃದ್ಧಿ ಖಾತೆ ಕೇಳುತ್ತೇನೆ. ಉಸ್ತುವಾರಿ ಜಿಲ್ಲೆ ಕೇಳಿದರೆ ಬೆಂಗಳೂರು ಜಿಲ್ಲೆಯನ್ನು ಕೇಳುತ್ತೇನೆ ಎಂದು ತಿಳಿಸಿದರು.