ಬೆಂಗಳೂರು : ಏರುಗತಿಯಲ್ಲಿ ಹರಡುತ್ತಿರುವ ಕೋವಿಡ್ ಪ್ರಕರಣಗಳು ಜನಸಾಮಾನ್ಯರನ್ನು ಮೃತ್ಯುಕೂಪಕ್ಕೆ ತಳ್ಳುತ್ತಿದೆ. ದಿನಪ್ರತಿ ಕೋವಿಡ್ ಸೋಂಕಿತರು ಬೆಡ್, ಆಕ್ಸಿಜನ್ ಇಲ್ಲದೆ ನಡು ಬೀದಿಯಲ್ಲೇ ಕೊನೆಯುಸಿರೆಳೆಯುತ್ತಿದ್ದಾರೆ, ಇತ್ತೀಚೆಗಷ್ಡೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ ಸುಮಾರು 24ರಷ್ಟು ಕೊರೋನಾ ಸೋಂಕಿತರು ಅಸುನೀಗಿದ್ದರು. ಆದರೂ ಎಚ್ಚೆತ್ತುಕೊಳ್ಳದ ಸರಕಾರ ಸೋಂಕಿತರಿಗೆ ಬೆಡ್, ವ್ಯವಸ್ಥೆಯನ್ನು ಮಾಡುವಲ್ಲಿ ವಿಫಲವಾಗಿದೆ.
ಇಂದು ಸಿಎಂ ನಿವಾಸ ಕಾವೇರಿ ಬಳಿ ಕೊವಿಡ್ ಸೋಂಕಿತ ಪತಿಗಾಗಿ ಬೆಡ್ ಗಾಗಿ ಪತ್ನಿ ಅಂಗಲಾಚಿದ ಘಟನೆ ನಡೆದಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಎಲ್ಲೂ ಬೆಡ್ ಸಿಗದ ಹಿನ್ನಲೆಯಲ್ಲಿ ಮಹಿಳೆಯು ಸಿಎಂ ಅಧಿಕೃತ ನಿವಾಸದ ಬಳಿಯೇ ಬಂದು ಬೆಡ್ ಒದಗಿಸಿಕೊಡಿ ಎಂದು ಅಂಗಲಾಚಿದ್ದಾಳೆ, ಮಹಿಳೆಯನ್ನು ಪೋಲಿಸರು ಸಮಾಧಾನಿಸಿ ಬೆಂಗಳೂರಿನ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆಯನ್ನು ಕಲ್ಪಿಸಿದ್ದರು, ಆದರೆ ದುರದೃಷ್ಟವಾತ್ ಆಸ್ಪತ್ರೆ ಸೇರುವ ಮುನ್ನವೇ ಪತಿ ಕೊನೆಯುಸಿರೆಳೆದಿದ್ದಾರೆ.
ಮೃತ ದುರ್ದೈವಿಯನ್ನು ರಾಮೋಹಳ್ಳಿಯ ಚಿಕ್ಕಲ್ಲೂರಿನ ಸತೀಶ್ ಎಂದು ಗುರುತಿಸಲಾಗಿದೆ. ಬಿಜೆಎಸ್ , ಅರ್ ಆರ್ ನಗರ ಹೆಲ್ಪ್ ಲೈನ್ ಸೇರಿದಂತೆ ಎಲ್ಲವೂ ಬ್ಯುಸಿಯಾಗಿದೆ, ಎಲ್ಲಾ ಆಸ್ಪತ್ರೆಗಳಲ್ಲೂ ಬೆಡ್ ಇಲ್ಲ, ಆಕ್ಸಿಜನ್ ಇಲ್ಲಾ ಎಂದು ನನ್ನ ಪತಿಗೆ ಆಸ್ಪತ್ರೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಸಿಎಂ ನಿವಾಸದ ಬಳಿ ಸೋಂಕಿತನ ಪತ್ನಿ ಪೋಲಿಸರೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದ ಕಾರಣಕ್ಕಾಗಿ ಪೋಲಿಸರು ವ್ಯವಸ್ಥೆ ಕಲ್ಪಿಸಿದ್ದರು, ಆದರೆ ಆದಾಗಲೆ ಗಂಭೀರ ಸ್ಥಿತಿಗೆ ತಲುಪಿದ್ದ ಆಕೆಯ ಪತಿ ಆಸ್ಪತ್ರೆ ತಲುಪುವ ಮುನ್ನವೇ ಜೀವ ಬಿಟ್ಟಿದ್ದಾರೆ.