ಕೋವಿಡ್ ನಿಂದ ಮೃತಪಟ್ಟ ಕುಟುಂಬಕ್ಕೆ ಪರಿಹಾರ ವಿತರಣೆಯಲ್ಲಿ ಗೊಂದಲ: ಒಂದೇ ದಿನ 2 ಆದೇಶದ ಬಳಿಕ ಮತ್ತೆ ಪರಿಷ್ಕರಿಸಿ ಸುತ್ತೋಲೆ

Prasthutha|

ಬೆಂಗಳೂರು: ಕೋವಿಡ್ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಸರ್ಕಾರ ಗೊಂದಲದಲ್ಲಿರುವಂತೆ ವರ್ತಿಸಿದ್ದು, ಸರ್ಕಾರದ ಹುಚ್ಚಾಟಕ್ಕೆ ಸಂತ್ರಸ್ತ ಕುಟುಂಬಕ್ಕೆ ಗೊಂದಲಕ್ಕೆ ಈಡಾಗಿದೆ. ಸರ್ಕಾರದ ಅದೇಶವೇ ಈ ಎಲ್ಲಾ ಗೊಂದಲಗಳಿಗೆ ಕಾರಣವಾಗಿದೆ.

- Advertisement -


ಕೊರೋನಾದಿಂದ ಮೃತಪಟ್ಟ ಬಿಪಿಎಲ್ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರ 1 ಲಕ್ಷ ಪರಿಹಾರ ನೀಡುವುದಾಗಿ ಸೆಪ್ಟಂಬರ್ 9ರಂದು ಅಧಿಕೃತ ಆದೇಶ ಹೊರಡಿಸಿತ್ತು. ಅದರಂತೆ 35 ಸಾವಿರ ಕ್ಕೂ ಹೆಚ್ಚು ಕೊರೋನಾ ಸೋಂಕಿಗೆ ಗುರಿಯಾಗಿ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಿಪಿಎಲ್ ಕುಟುಂಬಗಳಿಗೆ ತಲಾ 1ಲಕ್ಷ ರೂ ಪರಿಹಾರವನ್ನು ನೀಡುವುದಾಗಿ ತಿಳಿಸಿತ್ತು. ಅದೇ ರೀತಿ ರಾಜ್ಯ ವಿಪತ್ತು ನಿರ್ವಹಣೆ ವಿಭಾಗದಿಂದ ಹಣ ಬಿಡುಗಡೆ ಮಾಡುವಂತೆ ಸೂಚಿಸಿ ಸೆ.23ರಂದು ಸರ್ಕಾರಿ ಆದೇಶ ಹೊರಡಿಸಲಾಯಿತು. ಅಂದೇ ಸೆ.23 ರಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನ ಸೌಧದಲ್ಲಿ ಸುದ್ದಿಗೋಷ್ಠಿ ವೇಳೆಯಲ್ಲಿಯೇ 18 ಜನರಿಗೆ ಪರಿಹಾರದ ಚೆಕ್ ವಿತರಣೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಿದರು.
ಆದರೆ, ಸೆ. 28ರ ಸಂಜೆ 5 ಗಂಟೆಯ ವೇಳೆಗೆ ವಿಪತ್ತು ನಿರ್ವಹಣಾ ಇಲಾಖೆ ಹೊಸ ಸುತ್ತೋಲೆ ಹೊರಡಿಸಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಕೋವಿಡ್ ನಿಂದ ಮೃತಪಟ್ಟ ಕುಟುಂಬ ಸದಸ್ಯರಿಗೆ ಒಂದು ಲಕ್ಷದ ಬದಲು ತಲಾ 50 ಸಾವಿರ ಪರಿಹಾರ ನೀಡುವುದಾಗಿ ಪ್ರಕಟಿಸಿತು. ಸೆ 23ರಂದು ಹೊರಡಿಸಿದ ಆದೇಶವನ್ನು ಹಿಂಪಡೆದು ಹೊಸ ಆದೇಶದಂತೆ ಪರಿಹಾರ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿತ್ತು.


ಪರಿಹಾರ ನೀಡುವ ಆದೇಶದಲ್ಲಿ ಮಾರ್ಪಾಡು ಮಾಡಿರುವ ಮಾಹಿತಿ ಮಾಧ್ಯಮಗಳಲ್ಲಿ ಬಿತ್ತರಗೊಳ್ಳುತ್ತಿದ್ದಂತೆಯೇ ಎಚ್ಚೆತ್ತ ಸರ್ಕಾರ ಮತ್ತೊಂದು ಆದೇಶ ಹೊರಡಿಸಿ 28ರಂದು ಸಂಜೆ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಅದರಲ್ಲಿ ಕೋವಿಡ್ ನಿಂದ ಮೃತಪಟ್ಟ ಬಿಪಿಎಲ್ ಮತ್ತು ಬಿಪಿಎಲ್ ಯೇತರ ಕುಟುಂಬಗಳಿಗೆ ರಾಜ್ಯ ಸರ್ಕಾರವು ನೀಡುವ ಪರಿಹಾರ ಮೊತ್ತದಲ್ಲಿ ಬದಲಾವಣೆ ಮಾಡಿದ್ದು, ಬಿಪಿಎಲ್ ಕುಟುಂಬದ ವ್ಯಕ್ತಿಗೆ ನೀಡುವ ಪರಿಹಾವನ್ನು ಒಂದು ಲಕ್ಷ ರೂ.ನಿಂದ 1.50 ಲಕ್ಷ ರೂ.ಗೆ ಹೆಚ್ಚಳ ಮಾಡಲಾಗಿದೆ. ಇದೇ ವೇಳೆ ಬಿಪಿಎಲ್ ಯೇತರ ಕುಟುಂಬಕ್ಕೆ 50 ಸಾವಿರ ರೂ.ಪರಿಹಾರ ನೀಡುವುದಾಗಿ ಘೋಷಿಸಿದೆ.
ಬಿಪಿಎಲ್ ಕುಟುಂಬದವರಿಗೆ ರಾಜ್ಯ ಸರ್ಕಾರದ ಸಂಧ್ಯಾ ಸುರಕ್ಷಾ ಯೋಜನೆಯಡಿ ಒಂದು ಲಕ್ಷ ರೂ. ಮತ್ತು ರಾಜ್ಯ ವಿಪತ್ತು ನಿಧಿಯಿಂದ 50 ಸಾವಿರ ರೂ. ಸೇರಿ 1.50 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಬಿಪಿಎಲ್ ಕುಟುಂಬದ ಒಂದಕ್ಕಿಂತ ಹೆಚ್ಚು ಮಂದಿ ಕೋವಿಡ್ ನಿಂದ ದ ಮೃತಪಟ್ಟಿದ್ದರೆ ಆಗ ಮೊದಲ ವ್ಯಕ್ತಿಗೆ 1.50 ಲಕ್ಷ ರೂ. ಹಾಗೂ ಉಳಿದವರಿಗೆ ತಲಾ 50 ಸಾವಿರ ರು. ಪರಿಹಾರ ದೊರೆಯುತ್ತದೆ ಎಂದು ತಿಳಿಸಲಾಗಿದೆ.

- Advertisement -

ಎಲ್ಲಾ ತಾಲೂಕು ಕಚೇರಿ, ನಾಡ ಕಚೇರಿ ಮತ್ತು ಬಿಬಿಎಂಪಿ ವ್ಯಾಪ್ತಿಯ ವಾರ್ಡ್ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು. ವ್ಯಕ್ತಿಯು ರಾಜ್ಯದ ಯಾವುದೇ ಭಾಗದಲ್ಲಿ ಮೃತಪಟ್ಟಿದ್ದರೂ ಸಹ ಅರ್ಜಿದಾರರು ತಮ್ಮ ವಾಸಸ್ಥಳದ ವ್ಯಾಪ್ತಿಯಲ್ಲಿಯೇ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.ಈ ಸಂಬಂಧ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೋವಿಡ್ ನಿಂದ ಮೃತಪಟ್ಟವರ ಕುಟುಂಬ ಸದಸ್ಯರಿಗೆ 1 ಲಕ್ಷರೂ ಪರಿಹಾರ ನೀಡಲಾಗುವುದು ಸ್ಪಷ್ಟನೆ ನೀಡಿದ್ದಾರೆ.



Join Whatsapp