►2 ಸಾವಿರಕ್ಕಿಂತಲೂ ಅಧಿಕ ಪಾಸಿಟಿವ್ ಪ್ರಕರಣಗಳು !
► ಅಖಾಡ ಪರಿಷದ್ ಮುಖಂಡಮಹಾಂತ್ ನರೇಂದ್ರ ಏಮ್ಸ್ ಗೆ ದಾಖಲು
ದೇಶದಾದ್ಯಂತ ತೀವ್ರ ಆಕ್ರೋಶದ ಮಧ್ಯೆಯೂ ಉತ್ತರಾಖಂಡದ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಕೊರೋನಾ ತನ್ನ ರಣಕೇಕೆ ಮುಂದುವರೆಸಿದೆ. ಕುಂಭಮೇಳದಲ್ಲಿ ಭಾಗಿಯಾಗಿರುವ 30ಕ್ಕೂ ಹೆಚ್ಚು ಸಾಧುಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಆಲ್ ಇಂಡಿಯಾ ಅಖಾಡ ಪರಿಷದ್ ಮುಖಂಡ ಮಹಾಂತ ನರೇಂದ್ರಗಿರಿಯವರಿಗೂ ಕೋವಿಡ್ ದೃಢಪಟ್ಟಿದೆ. ಅವರನ್ನು ರಿಷಿಕೇಶದಲ್ಲಿರುವ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೇ ರೀತಿ ಮತ್ತೊಬ್ಬ ಪ್ರಭಾವಿ ಸಾಧುವಾಗಿರುವ ಮಧ್ಯಪ್ರದೇಶದ ಮಹಾನಿರ್ವಾನಿ ಅಖಾಡದ ಸ್ವಾಮಿ ಕಪಿಲ್ ದೇವ್ ಕೋವಿಡ್ ಬಾಧಿತರಾಗಿ ಡೆಹ್ರಾಡೂನಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಅವರನ್ನು ರಿಷಿಕೇಶದಿಂದ ಇಲ್ಲಿಗೆ ಸ್ಥಳಾಂತರಿಸಲಾಗಿತ್ತು.
ಕುಂಭಮೇಳ ಇನ್ನೂ 15 ದಿನಗಳ ಕಾಲ ನಡೆಯಲಿದೆ. ನಿರಂಜನಿ ಅಖಾಡವು ಶನಿವಾರದಿಂದ ಕುಂಭಮೇಳವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿತ್ತು. ಇದುವರೆಗಿನ ಐದು ದಿನಗಳ ಮೇಳದಲ್ಲಿ ಈ ಪ್ರದೇಶದ ಒಟ್ಟು ಎರಡು ಸಾವಿರಕ್ಕಿಂತಲೂ ಅಧಿಕ ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಈ ಎಲ್ಲಾ ವಿದ್ಯಮಾನಗಳ ಮಧ್ಯೆ ಉತ್ತರಾಖಂಡದ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಕುಂಭಮೇಳವನ್ನು ಮುಂದುವರೆಸುವುದಾಗಿ ಘೋಷಿಸಿದ್ದಾರೆ.