ಯುಎಇ | ಆರೋಗ್ಯ ಕಾರ್ಯಕರ್ತರ ನಂತರ ಶಿಕ್ಷಕರಿಗೂ ಕೋವಿಡ್ ಲಸಿಕೆ
Prasthutha: September 22, 2020

ಆರೋಗ್ಯ ಕಾರ್ಯಕರ್ತರ ನಂತರ ಅಬುಧಾಬಿಯ ಪಬ್ಲಿಕ್ ಸ್ಕೂಲ್ ಶಿಕ್ಷಕರಿಗೆ ಮತ್ತು ಸಿಬ್ಬಂದಿಗೆ ಕೋವಿಡ್ ಲಸಿಕೆ ಸ್ವೀಕರಿಸಲು ಯುಎಇ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ. ಅಬುಧಾಬಿಯಲ್ಲಿ ಪರೀಕ್ಷಿಸಲಾಗುತ್ತಿರುವ ಚೀನೀ ಸಿನೋಫಾರ್ಮ್ ಲಸಿಕೆಯನ್ನೂ ಶಿಕ್ಷಕರಿಗೆ ನೀಡಲಾಗುವುದು ಎಂದು ವರದಿಯೊಂದು ಹೇಳಿದೆ.
ಲಸಿಕೆ ಸ್ವೀಕರಿಸಲು ಸಿದ್ದರಿರುವ ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿ ಈ ತಿಂಗಳ 24ರ ಮೊದಲು ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಲಸಿಕೆಯನ್ನು ಶಿಕ್ಷಕರು ಮತ್ತು ಶಾಲಾ ಸಿಬ್ಬಂದಿಗೆ ಮಾತ್ರವಲ್ಲದೆ 18ವರ್ಷ ಪೂರ್ತಿಯಾದ ಅವರ ಕುಟುಂಬದ ಸದಸ್ಯರಿಗೂ ಸ್ವೀಕರಿಸಬಹುದು. ಶಿಕ್ಷಕರು ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಸ್ವಂತ ಇಚ್ಛೆಯಿಂದ ಸ್ವೀಕರಿಸಿದರೆ ಸಾಕು. ಈ ಹಿಂದೆ ಕೋವಿಡ್ ರೋಗಿಗಳೊಂದಿಗೆ ನೇರ ಸಂಪರ್ಕ ಹೊಂದಿರುವ ಆರೋಗ್ಯ ಕಾರ್ಯಕರ್ತರಿಗೆ ಇದೇ ರೀತಿಯ ಅನುಮತಿ ನೀಡಲಾಗಿತ್ತು. ಈ ಆದ್ಯತಾ ಪಟ್ಟಿಯಲ್ಲಿ ಶಿಕ್ಷಕರನ್ನೂ ಕೂಡಾ ಸೇರಿಸಲಾಗಿತ್ತು. ಯುಎಇ ಆರೋಗ್ಯ ಸಚಿವ ಅಬ್ದುಲ್ ರಹ್ಮಾನ್ ಬಿನ್ ಹುವೈಸ್ ಕೂಡಾ ಲಸಿಕೆ ಸ್ವೀಕರಿಸಿದ್ದಾರೆ.
