ಜಿನೇವಾ : ಭಾರತದಲ್ಲಿ ಮೊದಲು ಗುರುತಿಸಲ್ಪಟ್ಟ ಕೋವಿಡ್ 19ರ ಬಿ.1.617.1 ಮತ್ತು ಬಿ.1.617.2 ರೂಪಾಂತರಗಳಿಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ) ಗ್ರೀಕ್ ಅಕ್ಷರಗಳಲ್ಲಿ ‘ಕಪ್ಪಾ’ ಮತ್ತು ‘ಡೆಲ್ಟಾ’ ಎಂದು ಹೆಸರಿಸಿದೆ. ಸಾರ್ಸ್ ಕೋವ್-2 ಹೆಸರನ್ನು ಬಳಸಲು ಅನುಕೂಲವಾಗಲು ಮತ್ತು ಸದ್ಯ ಇರುವ ವೈಜ್ಞಾನಿಕ ಹೆಸರುಗಳ ಬದಲು, ಹೊಸ ಲೇಬಲ್ ಹಾಕುತ್ತಿದ್ದೇವೆ. ಇದು ಸಾರ್ವಜನಿಕ ಚರ್ಚೆಯಲ್ಲಿ ಸಹಾಯ ಮಾಡುವ ಗುರಿಯನ್ನು ಹೊಂದಿದೆ ಎಂದು ಡಬ್ಲ್ಯೂಎಚ್‌ಒನ ಕೋವಿಡ್ ವಿಷಯಗಳ ತಾಂತ್ರಿಕ ವಿಭಾಗದ ಮುಖ್ಯಸ್ಥೆ ಡಾ. ಮರಿಯಾ ವ್ಯಾನ್ ಕೆರ್ಖೊವ್ ಟ್ವೀಟ್ ಮಾಡಿದ್ದಾರೆ.
ಭಾರತದ ಕೋವಿಡ್ 19 ರೂಪಾಂತರ ಬಿ.1.617.1ಗೆ ʼಕಪ್ಪಾʼ ಮತ್ತು ಬಿ.1.617.2 ʼಡೆಲ್ಟಾʼ ಎಂದು ಕರೆಯಲಾಗಿದೆ ಎಂದು ಡಬ್ಲ್ಯೂಎಚ್‌ಒ ತಿಳಿಸಿದೆ. ಬಿ.617 ರೂಪಾಂತರವನ್ನು ʼಭಾರತೀಯ ರೂಪಾಂತರʼ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬಳಸುತ್ತಿದ್ದ ಬಗ್ಗೆ ಕೇಂದ್ರ ಸರಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ವಿಶ್ವ ಆರೋಗ್ಯ ಸಂಸ್ಥೆ ಇದಕ್ಕೆ ಭಾರತದ ರೂಪಾಂತರ ಎಂಬ ಹೆಸರು ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿಕೆ ನೀಡಿದ ಮೂರು ವಾರಗಳ ಬಳಿಕ ಡಬ್ಲ್ಯೂಎಚ್‌ಒ ಈ ನಿರ್ಧಾರ ಕೈಗೊಂಡಿದೆ.