ಮಂಜೇಶ್ವರ : ಮಂಜೇಶ್ವರದ ಬಿಎಸ್ ಪಿ ಅಭ್ಯರ್ಥಿಗೆ ನಾಮಪತ್ರ ಹಿಂಪಡೆಯಲು ಆಮಿಷವೊಡ್ಡಿದ್ದ ಆರೋಪ ಹಿನ್ನಲೆಯಲ್ಲಿ ಕೇರಳ ಬಿಜೆಪಿ ಮುಖಂಡ ಕೆ. ಸುರೇಂದ್ರನ್ ವಿರುದ್ಧ FIR ದಾಖಲಿಸುವಂತೆ ಕೋರ್ಟ್ ಆದೇಶಿಸಿದೆ.
ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ, ಮಂಜೇಶ್ವರ ಎಲ್ಡಿಎಫ್ ಅಭ್ಯರ್ಥಿ ವಿ ವಿ ರಮೇಶನ್ ಸಲ್ಲಿಸಿದ್ದ ಅರ್ಜಿಯ ಮೇರೆಗೆ ಕಾಸರಗೋಡಿನ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಈ ನಿರ್ದೇಶನ ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅರ್ಜಿದಾರ ರಮೇಶನ್ ಪರ ವಕೀಲ ಸಿ.ಶುಕೂರ್, ಚುನಾವಣೆಯಿಂದ ಹಿಂದೆ ಸರಿಯಲು ಲಂಚ ನೀಡಲಾಗಿದೆ ಎಂದು ಹೇಳಿದ ಕೆ ಸುಂದರ ಅವರ ಹೇಳಿಕೆಗಳ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾವು ನ್ಯಾಯಾಲಯ ಮೆಟ್ಟಿಲೇರಿದ್ದೇವೆ ಎಂದು ಹೇಳಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ಕ್ಷೇತ್ರದ ಬಿಎಸ್ ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರ ಮಾರ್ಚ್ 22ರಂದು ತಮ್ಮ ನಾಮಪತ್ರ ಹಿಂಪಡೆದಿದ್ದರು. ಕೆ. ಸುಂದರ ಮತ್ತು ಬಿಜೆಪಿ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಹೆಸರು ತಾಳೆಯಾಗುವುದರಿಂದ ನಾಮಪತ್ರ ಹಿಂಪಡೆಯುವಂತೆ ಆಮಿಷ ಒಡ್ಡಿದ್ದರು ಎಂದು ಆರೋಪಿಸಲಾಗಿದೆ.
“ಬಿಜೆಪಿ ನಾಯಕರು ನಾಮಪತ್ರ ಹಿಂಪಡೆದುಕೊಳ್ಳುವಂತೆ ಆಮಿಷವೊಡ್ಡಿದ್ದರು. ನಾನು 15 ಲಕ್ಷ ರೂಪಾಯಿ ಕೇಳಿದ್ದೆ. ಆದರೆ ಅವರು ನನಗೆ ಕೇವಲ 2.5 ಲಕ್ಷ ರೂಪಾಯಿ ಹಾಗೂ 15 ಸಾವಿರ ಮೌಲ್ಯದ ಮೊಬೈಲ್ ಫೋನ್ ನೀಡಿದ್ದರು. ಮಂಜೇಶ್ವರದಲ್ಲಿ ಬಿಜೆಪಿ ಗೆದ್ದರೆ ಕರ್ನಾಟಕದಲ್ಲಿ ಒಂದು ಮದ್ಯದ ಅಂಗಡಿಗೆ ಅವಕಾಶ ಕೊಡಿಸಬೇಕು ಎಂದು ಕೇಳಿದ್ದೆ. ಆದರೆ ಚುನಾವಣೆ ಮುಗಿದ ನಂತರ ಯಾರೂ ನನ್ನನ್ನು ಸಂಪರ್ಕಿಸಲಿಲ್ಲ ಎಂದು ಸುಂದರ ಆರೋಪಿಸಿದ್ದರು.