ಬೆಂಗಳೂರು : ಬಳ್ಳಾರಿ ಕಬ್ಬಿಣದ ಅದಿರು ದೊರೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಗೆ ಈಗ ಇನ್ನೊಂದು ಸಂಕಷ್ಟ ಎದುರಾಗಿದೆ. ಈ ಹಿಂದೆ ಕಬ್ಬಿಣದ ಅದಿರು ಅಕ್ರಮವಾಗಿ ಮಾರಾಟ ಮಾಡಿದ ಹಾಗೂ ಸರಕಾರಕ್ಕೆ ರಾಯಲ್ಟಿ ಮತ್ತು ಇತರೆ ತೆರಿಗೆಗಳನ್ನು ನೀಡದೆ ವಂಚಿಸಿದ ಆರೋಪಗಳಿಗೆ ಸಂಬಂಧಿಸಿದಂತೆ ಜನಾರ್ದನ ರೆಡ್ಡಿ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ತನಿಖಾ ತಂಡ ಸಲ್ಲಿಸಿದ್ದ ಖಾಸಗಿ ದೂರಿನ ವಿಚಾರಣೆ ನಡೆಸಿದ ಸಂಸದರು ಹಾಗೂ ಶಾಸಕರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ಕೋರ್ಟ್, ಈ ಆದೇಶ ಹೊರಡಿಸಿದೆ.
ಕೋರ್ಟ್ ತನ್ನ ಆದೇಶದಲ್ಲಿ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಆಪ್ತ ಕಾರ್ಯದರ್ಶಿ ಕೆ.ಎಂ.ಆಲಿಖಾನ್ ಹಾಗೂ ಬಿ.ವಿ.ಶ್ರೀನಿವಾಸ ರೆಡ್ಡಿ ವಿರುದ್ಧ ಗಣಿ ಮತ್ತು ಖನಿಜ ನಿಯಂತ್ರಣಗಳ ಕಾಯ್ದೆಯ ಸೆಕ್ಷನ್ 21, 23 ಹಾಗೂ 4(1) ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.