ಕೊರೊನಾದಿಂದ ಆತ್ಮಹತ್ಯೆಗೆ ಶರಣಾದ ದಂಪತಿ | ಜೀವ ಉಳಿಸಲು ಕೈಗೂಡದ ಕಮಿಷನರ್ ಪ್ರಯತ್ನ

Prasthutha|

ಮಂಗಳೂರು: ಕೊರೊನಾ ಸೋಂಕಿಗೆ ತುತ್ತಾದ ದಂಪತಿ ಪೊಲೀಸ್ ಕಮೀಷನರ್ ಗೆ ಕರೆ ಮಾಡಿದ ಬಳಿಕ ಆತ್ಮಹತ್ಯೆ ಶರಣಾಗಿರುವ ಘಟನೆ ನಗರದ ಹೊರವಲಯದ ಬೈಕಂಪಾಡಿ ಚಿತ್ರಾಪುರ ಬಳಿ ನಡೆದಿದೆ.
ಆದಾಗ್ಯೂ, ಕರೆಯನ್ನಾಧರಿಸಿ ಮನವೊಲಿಸಲು ಪೊಲೀಸ್ ಕಮೀಷನರ್ ಮಾಡಿದ್ದ ಪ್ರಯತ್ನ ಕೊನೆಗೂ ಕೈಗೂಡಲಿಲ್ಲ.

- Advertisement -

ರೆಹೆಜಾ ಅಪಾರ್ಟ್‌ಮೆಂಟ್ ನಲ್ಲಿ ವಾಸವಾಗಿದ್ದ ರಮೇಶ ಸುವರ್ಣ(45) ಮತ್ತು ಗುಣ ಸುವರ್ಣ(35) ಆತ್ಮಹತ್ಯೆ ಮಾಡಿಕೊಂಡ ದಂಪತಿ. ಇವರು ಮೂಲತಃ ಪಡುಬಿದ್ರಿ ನಿವಾಸಿಗಳು. ರಮೇಶ ಸುವರ್ಣ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದರು. ಗುಣ ಆರ್. ಸುವರ್ಣ ಡೆತ್ ನೋಟ್ ಬರೆದಿದ್ದು ಅದರಲ್ಲಿ ತಾವು ಆತ್ಮಹತ್ಯೆ ಮಾಡಲು ಕಾರಣವನ್ನು ಬರೆದಿದ್ದಾರೆ.

ಪತ್ನಿ ಗುಣ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ಬೆನ್ನಲ್ಲೇ ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರಿಗೆ ಕರೆ ಮಾಡಿದ ಪತಿ ರಮೇಶ್ “ಈಗಾಗಲೇ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದು, ನಾನೂ ಆತ್ಮಹತ್ಯೆ ಮಾಡುತ್ತಿದ್ದೇನೆ. ನಮ್ಮ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಿ” ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ.
ತಕ್ಷಣ ಆಯುಕ್ತರು ಕರೆ ವಾಪಾಸ್ ಮಾಡಿದ್ದು ಸ್ವೀಕರಿಸದ ಹಿನ್ನೆಲೆ ವಾಯ್ಸ್ ಮೆಸೇಜ್ ಮೂಲಕ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಅಲ್ಲದೇ ನಗರ ವ್ಯಾಪ್ತಿಯ ಪೊಲೀಸ್ ಹಾಗೂ ಪತ್ರಕರ್ತರ ಗಮನಕ್ಕೆ ತಂದು ಯಾರಾದರೂ ಪರಿಚಿತರಿದ್ದಲ್ಲಿ ತಕ್ಷಣವೇ ಅವರ ಮನೆಯನ್ನು ತಲುಪುವಂತೆ ಪೊಲೀಸ್ ಆಯುಕ್ತರು ಭಾವುಕರಾಗಿ ಮೆಸೇಜ್ ರವಾನಿಸಿದ್ದಾರೆ.
ಆದರೆ ಪೊಲೀಸರು ನಂಬರ್ ಟ್ರ್ಯಾಕ್ ಮಾಡಿ ಬೈಕಂಪಾಡಿಯ ಅಪಾರ್ಟ್ ಮೆಂಟ್ ತಲುಪುವ ಮುನ್ನವೇ ದಂಪತಿ ನೇಣಿಗೆ ಶರಣಾಗಿದ್ದಾರೆ.

- Advertisement -

” ನನ್ನ ತಂದೆ, ತಾಯಿ ಹಾಗೂ ತಮ್ಮನಿಗೂ ಕೋವಿಡ್ ಸೋಂಕು ತಗುಲಿದ್ದು, ಚೇತರಿಸಿಕೊಂಡಿದ್ದಾರೆ. ಆದ್ದರಿಂದ ಅವರಿಗೆ ನಮ್ಮ ಅಂತ್ಯಕ್ರಿಯೆ ತೊಂದರೆ ತೊಂದರೆಯನ್ನು ಕೊಡಬಾರದು. ನನಗೆ 2 ಬಾರಿ ಸಿಝೇರಿಯನ್ ಆಗಿ ಮಕ್ಕಳ ಸಮಸ್ಯೆಯಾದರೂ ಎಲ್ಲಿ ಹೋದರೂ ಮಕ್ಕಳ ಬಗ್ಗೆಯೇ ಕೇಳುತ್ತಿದ್ದಾರೆ. ಅದಕ್ಕಾಗಿ ನಾನು ಹೆಚ್ಚು ಯಾರ ಜೊತೆನೂ ಬೆರೆಯುತ್ತಿರಲಿಲ್ಲ. ಹಿಂದೂ ಸಂಘಟನೆಯ ಶರಣ್ ಪಂಪ್‌ವೆಲ್ ಮತ್ತು ಸತ್ಯಜಿತ್ ಸುರತ್ಕಲ್ ಅವರಲ್ಲಿ ವಿನಂತಿ ಮಾಡುವುದೇನೆಂದರೆ ನಮ್ಮನ್ನು ನಮ್ಮ ಹಿಂದೂ ಸಂಪ್ರದಾಯ ಪ್ರಕಾರ ಅಂತ್ಯಸಂಸ್ಕಾರ ನಡೆಸಿ. ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂ. ಇಟ್ಟಿದ್ದೇವೆ. ನಮ್ಮ ಮನೆಯಲ್ಲಿರುವ ವಸ್ತುಗಳನ್ನು ಬಡವರಿಗೆ ನೀಡಿ. ಈ ಮನೆಯ ಮಾಲೀಕರಲ್ಲೂ ಕ್ಷಮೆ ಕೇಳುತ್ತೇವೆ” ಎಂದು ಗುಣ ಸುವರ್ಣ ಅವರು ಆತ್ಮಹತ್ಯೆ ಡೆತ್ ನೋಟ್ ಬರೆದಿರುವುದು ಪತ್ತೆಯಾಗಿದೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್, ಡಿಸಿಪಿ ಹರಿರಾಂ ಶಂಕರ್, ಸುರತ್ಕಲ್, ಪಣಂಬೂರು ಇನ್‌ಸ್ಪೆಕ್ಟರ್ ಸ್ಥಳಕ್ಕೆ ತೆರಳಿದ್ದಾರೆ.



Join Whatsapp