ವಾರ್ತಾಭಾರತಿ ಪತ್ರಿಕೆಗೆ ಸರ್ಕಾರಿ ಜಾಹೀರಾತು ನಿಲ್ಲಿಸಿದ ಸರ್ಕಾರದ ಕ್ರಮಕ್ಕೆ ಎಸ್.ಜಿ.ಸಿದ್ದರಾಮಯ್ಯ ತೀವ್ರ ಅಸಮಾಧಾನ

Prasthutha|

ಬೆಂಗಳೂರು: ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಒಂದಾದ “ವಾರ್ತಾ ಭಾರತಿ”ಗೆ ಸರ್ಕಾರಿ ಜಾಹೀರಾತು ನೀಡದ ಸರ್ಕಾರದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಹಿರಿಯ ಸಾಹಿತಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ, ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

- Advertisement -

ಪತ್ರದ ಸಾರಾಂಶ

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ ತಮಗೆ ಶುಭಾಶಯಗಳು
ಸಂಕಷ್ಟಗಳ ಸರಮಾಲೆಯನ್ನು ಎದುರಿಸುತ್ತಿರುವ ರಾಜ್ಯವನ್ನು ಸಮರ್ಥವಾಗಿ ಮುನ್ನಡೆಸುವಂತಹ ಉದ್ದೇಶ ಮತ್ತು
ಅದಕ್ಕೆ ಬೇಕಾಗಿರುವ ಕ್ಷಮತೆ ನಿಮ್ಮಲ್ಲಿದೆ. ನಿಮ್ಮ ಹೊಸ ಜವಾಬ್ದಾರಿ ರಾಜ್ಯಕ್ಕೆ ಮತ್ತು ನಿಮಗೆ ಒಳಿತನ್ನುಂಟು ಮಾಡಲಿ
ಎಂದು ಹಾರೈಸುತ್ತೇನೆ.

- Advertisement -

ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಸಂವಿಧಾನದ ಮೂರು ಅಂಗಗಳಾದ ಶಾಸಕಾಂಗ ನ್ಯಾಯಾಂಗ ಮತ್ತು ಕಾರ್ಯಾ೦ಗದ ಜೊತೆಯಲ್ಲಿ ನಾಲ್ಕನೆಯ ಅಂಗವೆನಿಸಿಕೊಂಡ ಮಾಧ್ಯಮದ ಪಾತ್ರವೂ ನಿರ್ಣಾಯಕವಾದುದು ಎನ್ನುವುದು ತಮಗೆ ತಿಳಿದಿದೆ. ಮಾಧ್ಯಮಗಳು ಕಾವಲು ನಾಯಿಯಂತೆ ಕೆಲಸ ಮಾಡಬೇಕಾಗಿರುವುದು ವೃತ್ತಿಧರ್ಮವಾಗಿದೆ. ಸರ್ಕಾರವೊಂದು ಒಳ್ಳೆಯ ಕೆಲಸಗಳನ್ನು ಮಾಡಿದಾಗ ಬೆನ್ನು ಕಟ್ಟುತ್ತಾ, ಎಡವಿದಾಗ ಎಚ್ಚರಿಸುತ್ತಾ ಇರಬೇಕಾಗುತ್ತದೆ. ಈ ವೃತ್ತಿಧರ್ಮವನ್ನು ಸರ್ಕಾರ ಮತ್ತು ಆಡಳಿತಾರೂಢ ಪಕ್ಷಗಳು ಗೌರವಿಸಬೇಕಾಗುತ್ತದೆ. ನಿಮ್ಮ ಇಲ್ಲಿಯ ವರೆಗಿನ ರಾಜಕೀಯ ಜೀವನದಲ್ಲಿ ಈ ನೀತಿ ಸಂಹಿತೆಗೆ ಅನುಗುಣವಾಗಿ ನಡೆದುಕೊಂಡು ಬಂದಿದ್ದೀರಿ ಎನ್ನುವ ಕಾರಣಕ್ಕೆ ಭರವಸೆ ಇಟ್ಟು ಈ ಪತ್ರ ಬರೆಯುತ್ತಿದ್ದೇನೆ. ಕಳೆದ ಹದಿನೆಂಟು ವರ್ಷಗಳಿಂದ ಮಂಗಳೂರು, ಶಿವಮೊಗ್ಗ ಮತ್ತು ಬೆಂಗಳೂರಿನಿಂದ ಪ್ರಕಟವಾಗುತ್ತಿರುವ ವಾರ್ತಾಭಾರತಿ ಪತ್ರಿಕೆ ರಾಜ್ಯದ ಪತ್ರಿಕೆಯಾಗಿದೆ. ಇದು ವಾರ್ತಾ ಇಲಾಖೆ ಮಾನ್ಯತೆ ನೀಡಿರುವ ಎಂಟು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಒಂದಾಗಿದೆ. ಸತ್ಯ ಮತ್ತು ನ್ಯಾಯಕ್ಕೆ ನಿಷ್ಟುರವಾಗಿ ನಡೆದುಕೊಂಡು ಬರುತ್ತಿರುವ ಪತ್ರಿಕೆ ರಾಜ್ಯದ ಪ್ರಜ್ಞಾವಂತ ಓದುಗರ ನೆಚ್ಚಿನ ಪತ್ರಿಕೆಯೂ ಆಗಿದೆ.

ರಾಜ್ಯದ ವಾರ್ತಾ ಇಲಾಖೆ ಕಾಲಕಾಲಕ್ಕೆ ಪತ್ರಿಕೆಗಳಿಗೆ ಅವುಗಳ ವರ್ಗೀಕರಣಕ್ಕೆ ಅನುಗುಣವಾಗಿ ನಿಯಮಾನುಸಾರ ಜಾಹೀರಾತು ನೀಡುತ್ತದೆ. ಆದರೆ ಈ ಇಲಾಖೆಯ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಹರ್ಷ ಪಿ.ಎಲ್ ಅಧಿಕಾರ ಸ್ವೀಕಾರ ಮಾಡಿದ ದಿನದಿಂದ ವಾರ್ತಾಭಾರತಿ ಪತ್ರಿಕೆಗೆ ಸರ್ಕಾರಿ ಜಾಹೀರಾತನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ರಾಜ್ಯದ ಪತ್ರಕರ್ತರ ಸಂಘಟನೆಯ ಪದಾಧಿಕಾರಿಗಳ ಒತ್ತಾಯಕ್ಕೆ ಮಣಿದು ಕಳೆದ ತಿಂಗಳು ನೀಡಿದ್ದ ಎರಡು ಮೂರು ಪುಟಗಳ ಜಾಹೀರಾತನ್ನು ಹೊರತುಪಡಿಸಿದರೆ ಉಳಿದಂತೆ ಸಂಪೂರ್ಣವಾಗಿ ಜಾಹೀರಾತನ್ನು ನಿಲ್ಲಿಸಲಾಗಿದೆ. ಇದು ಅನ್ಯಾಯ ಮಾತ್ರವಲ್ಲ ಕಾನೂನು ವಿರೋಧಿ ನಡೆ ಎಂದು ವಿಷಾದದಿಂದ ಹೇಳಬೇಕಾಗಿದೆ.

ಕೊರೊನಾ ಹಾವಳಿಯಿಂದಾಗಿ ಉದ್ಯಮ, ಮಾಧ್ಯಮ ಕ್ಷೇತ್ರಗಳು ಮಾತ್ರವಲ್ಲ, ಜಾಹೀರಾತುಮೂಲದ ಆದಾಯ ಇಲ್ಲದೆ ಮಾಧ್ಯಮಗಳು ಕೂಡಾ ಸಂಕಷ್ಟದಲ್ಲಿ ಸಿಲುಕಿವೆ. ಇಂತಹ ಸಂದರ್ಭದಲ್ಲಿ ಕಷ್ಟದಲ್ಲಿರುವ ಮಾಧ್ಯಮಗಳಿಗೆ ನೆರವಾಗಬೇಕಾಗಿರುವ ಸರ್ಕಾರ ದುರುದ್ದೇಶದಿಂದ ಪತ್ರಿಕೆಯ ವಿರುದ್ಧ ಸೇಡು ತೀರಿಸಿಕೊಳ್ಳುವಂತೆ ನಿಲಿಸಿರುವುದು ಅತ್ಯಂತ ಖಂಡನೀಯ ಪತ್ರಿಕೆಯಲ್ಲಿ 200ಕ್ಕೂ ಹೆಚ್ಚು ಉದ್ಯೋಗಿಗಳಿದ್ದಾರೆ. ಆದಾಯದಲ್ಲಿನ ಕೊರತೆಯಿಂದಾಗಿ ಅವರಿಗೆ ಸಂಬಳ ನೀಡುವುದು ಕೂಡ ಕಷ್ಟವಾಗುತ್ತಿದೆ.

ನೀವು ಈಗ ಮಾನ್ಯ ಮುಖ್ಯ ಮಂತ್ರಿಗಳು ಮಾತ್ರವಲ್ಲ ರಾಜ್ಯ ವಾರ್ತಾ ಇಲಾಖೆಯ ಸಚಿವರೂ ಆಗಿದ್ದೀರಿ. ತಾವು ತಕ್ಷಣ ಮಧ್ಯೆ ಪ್ರವೇಶಿಸಿ ಈ ಅನ್ಯಾಯವನ್ನು ಸರಿಪಡಿಸಿ ವಾರ್ತಾಭಾರತಿ ಪತ್ರಿಕೆಗೆ ಜಾಹೀರಾತು ಕೊಡಿಸುವುದರ ಜೊತೆಯಲ್ಲಿ ಕಳೆದ ಹದಿನೆಂಟು ತಿಂಗಳುಗಳಿಂದ ಜಾಹೀರಾತನ್ನು ನಿರಾಕರಿಸುವುದರಿಂದ ಅವರು ಅನುಭವಿಸಿದ ನಷ್ಟವನ್ನೂ ಕೂಡ ತುಂಬಿಕೊಡಬೇಕೆಂದು ಮನವಿ ಮಾಡುತ್ತೇನೆ.

Join Whatsapp