ಮಹಿಳೆಯರ ಭಾಗವಹಿಸುವಿಕೆ ಇಲ್ಲದೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ: ಎಸ್ ವರಲಕ್ಷ್ಮಿ

Prasthutha|

ಮಂಗಳೂರು: ದೇಶದ ಜನಸಂಖ್ಯೆಯಲ್ಲಿ ಅರ್ಧ ಭಾಗದಷ್ಟು ಮಹಿಳೆಯರಿದ್ದರೂ ಮಹಿಳಾ ಸಬಲೀಕರಣದ ಪ್ರಶ್ನೆ ಮುಂಚೂಣಿಗೆ ಬರುತ್ತಿಲ್ಲ. ಪುರುಷ ಪ್ರಧಾನ ವ್ಯವಸ್ಥೆ ಮಹಿಳೆಯರನ್ನು ಅತ್ಯಂತ ಕೀಳಾಗಿ ಕಾಣುತ್ತಾ, ಭೋಗದ ವಸ್ತುವನ್ನಾಗಿಸಿ, ನಾಲ್ಕು ಗೋಡೆಗಳ ಮಧ್ಯೆ ಬಂಧಿಯನ್ನಾಗಿಸಿದೆ. ಸಮಾಜದಲ್ಲಿ ನಡೆಯುತ್ತಿರುವ ಎಲ್ಲಾ ಅನಿಷ್ಟಗಳಿಗೆ ಮಹಿಳೆಯರನ್ನೇ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ. ಇವೆಲ್ಲವನ್ನೂ ಮೀರಿ ಮಹಿಳೆ ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಸೇರಿದಂತೆ ಸಾಮಾಜಿಕ ಆರ್ಥಿಕ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿ ಇರಬೇಕು. ಒಟ್ಟಿನಲ್ಲಿ ಮಹಿಳೆಯರು ಭಾಗವಹಿಸದೆ ದೇಶದ ಅಭಿವೃದ್ಧಿ ಖಂಡಿತಾ ಸಾಧ್ಯವಿಲ್ಲ ಎಂದು CITU ಕರ್ನಾಟಕ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮಿ ಅಭಿಪ್ರಾಯಪಟ್ಟಿದ್ದಾರೆ.
ಅವರು ಬುಧವಾರ ನಗರದ ಮಲ್ಲಿಕಟ್ಟೆಯಲ್ಲಿರುವ ಸುಮಾ ಸದನದಲ್ಲಿ ಜರುಗಿದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಹಾಗೂ ಜನವಾದಿ ಮಹಿಳಾ ಸಂಘಟನೆಗಳ ಜಂಟಿ ಆಶ್ರಯದಲ್ಲಿ SFI -DYFI ಸಹಕಾರದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ JMS ಜಿಲ್ಲಾಧ್ಯಕ್ಷರಾದ ಜಯಂತಿ ಶೆಟ್ಟಿ ಮಾತನಾಡಿ, ದುಡಿಯುವ ಮಹಿಳೆಯರ ಪ್ರಶ್ನೆಯಲ್ಲಿ ಹುಟ್ಟಿಕೊಂಡ ಚಳುವಳಿ ಜಗತ್ತಿನಾದ್ಯಂತ ಹಬ್ಬಿಕೊಂಡು, ಮಹಿಳಾ ಸ್ವಾತಂತ್ರ್ಯ, ಸಮಾನತೆ, ಸಬಲೀಕರಣದ ವಿಚಾರ ಪ್ರಧಾನವಾಗಿ ಬೆಳಕಿಗೆ ಬಂದು ಬಳಿಕ ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಆಚರಿಸಲ್ಪಟ್ಟಿತು. ಆದರೆ ಇಂದು ಮತ್ತೆ ಮಹಿಳೆಯರನ್ನು ಗುಲಾಮರನ್ನಾಗಿಸುವ ಕುತಂತ್ರ ನಡೆಯುತ್ತಿದೆ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಜಿಲ್ಲಾ ಸಂಚಾಲಕರಾದ ಪದ್ಮಾವತಿ ಶೆಟ್ಟಿ ಮಾತನಾಡಿ, ಒಂದು ಕಡೆ ಮಹಿಳೆಯರನ್ನು ಮಾತೆಯರೆಂದು ಕೊಂಡಾಡುತ್ತಾ ಮತ್ತೊಂದು ಕಡೆ ಮಹಿಳೆಯರ ಮೇಲಿನ ದೌರ್ಜನ್ಯ, ಕೊಲೆ, ಅತ್ಯಾಚಾರ ಪ್ರಕರಣಗಳು ಪ್ರತಿನಿತ್ಯ ಹೆಚ್ಚಾಗುತ್ತಿದೆ. ದೇಶವನ್ನಾಳುವ ಸರಕಾರಗಳು ದಿವ್ಯಮೌನ ವಹಿಸುವ ಮೂಲಕ ತಾನು ಮಹಿಳಾ ವಿರೋಧಿಯೆಂದು ಸಾಬೀತುಪಡಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ JMS ಜಿಲ್ಲಾ ನಾಯಕರಾದ ಭಾರತಿ ಬೋಳಾರ, ರಾಧಾ ಮೂಡಬಿದ್ರಿ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ನಾಯಕರಾದ ಗಿರಿಜಾ, ಜಯಲಕ್ಷ್ಮಿ,ಯುವತಿಯರ ಉಪಸಮಿತಿಯ ಸಂಚಾಲಕರಾದ ಆಶಾ ಬೋಳೂರು,ವಿದ್ಯಾರ್ಥಿನಿಯರ ಉಪಸಮಿತಿಯ ನಾಯಕಿ ಶಿವಾನಿ ಕುತ್ತಾರ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ CITU ಜಿಲ್ಲಾ ನಾಯಕರಾದ ಜೆ ಬಾಲಕೃಷ್ಣ ಶೆಟ್ಟಿ, ಸುನಿಲ್ ಕುಮಾರ್ ಬಜಾಲ್, ವಸಂತ ಆಚಾರಿ, ಯೋಗೀಶ್ ಜಪ್ಪಿನಮೊಗರು, ವಸಂತಿ ಕುಪ್ಪೆಪದವು,ಭವಾನಿ ವಾಮಂಜೂರು,ಪುಷ್ಪ,ಲಕ್ಷ್ಮಿ, ವಾರಿಜಾ,JMS ನಾಯಕರಾದ ಲೋಲಾಕ್ಷಿ ಬಂಟ್ವಾಳ, ವಿಲಾಸಿನಿ ತೊಕ್ಕೊಟ್ಟು, ಪ್ರಮೀಳಾ ಶಕ್ತಿನಗರ,ಅಸುಂತ ಡಿಸೋಜ,ಸಾಮಾಜಿಕ ಚಿಂತಕರಾದ ಕ್ವೀನಿ ಪರ್ಸಿ ಆನಂದ್, ಫ್ಲೇವಿ ಕ್ರಾಸ್ತಾ, ಶಾಂತಿ ಡಯಾಸ್,ಆಶಾ ಸಂಜೀವನಾ ಮುಂತಾದವರು ಹಾಜರಿದ್ದರು

Join Whatsapp