ಬೆಂಗಳೂರು: ನಗರ ಪೊಲೀಸರನ್ನು ಕೊರೊನಾ ಬೆಂಬಿಡದೆ ಕಾಡುತ್ತಿದ್ದು ಇಲ್ಲಿಯವರೆಗೆ 738 ಪೊಲೀಸ್ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು
ಆರೋಗ್ಯದ ಬಗ್ಗೆ ಎಚ್ಚರ ವಹಿಸುವಂತೆ ತಮ್ಮ ಸಿಬ್ಬಂದಿ ಸೂಚನೆ ನೀಡಿದ್ದಾರೆ.
ಪೊಲೀಸ್ ಠಾಣೆ ಬಿಟ್ಟು ಹೊರಗೆ ಕೆಲಸ ಮಾಡುವ ಸಿಬ್ಬಂದಿಗೆ ಕೊರೊನಾ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದ್ದು, ಗರ್ಭಿಣಿ ಸಿಬ್ಬಂದಿಯಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿದರೆ ಕರ್ತವ್ಯಕ್ಕೆ ಬರದೇ ಮನೆಯಲ್ಲಿಯೇ ಇರುವಂತೆ ಸೂಚನೆ ನೀಡಿದ್ದಾರೆ.
ಇನ್ನು ಆಯಾ ವಿಭಾಗದ ಡಿಸಿಪಿಗಳು ಮತ್ತು ಇನ್ಸ್ಪೆಕ್ಟರ್ಗಳಿಗೆ ಪರಿಸ್ಥಿತಿಗೆ ಅನುಗುಣವಾಗಿ ಸಿಬ್ಬಂದಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಚನೆ ನೀಡಿದ್ದಾರೆ.
ಹೊಯ್ಸಳ ರೌಂಡ್ಸ್ ಮತ್ತು ಚೀತಾ ಗಸ್ತುನಲ್ಲಿ ಎಲ್ಲಾ ಹಿರಿಯ ಸಿಬ್ಬಂದಿ ಹೊರತುಪಡಿಸಿ ಯುವ ಸಿಬ್ಬಂದಿ ತೆರಳಲು ಸೂಚನೆ ನೀಡಲಾಗಿದ್ದು, ಠಾಣೆ ಹಾಗೂ ವಾಹನಗಳಿಗೆ ಪ್ರತಿ ನಿತ್ಯ ಎರಡು ಬಾರಿ ಸ್ಯಾನಿಟೈಸ್ ಮಾಡುವಂತೆ ಹಾಗೂ ಸಿಬ್ಬಂದಿಗೆ ಫೇಸ್ಶೀಲ್ಡ್, ಮಾಸ್ಕ್ ಧರಿಸುವಂತೆ ಕಡ್ಡಾಯ ಮಾಡಲಾಗಿದೆ ಎಂದು ಕಮೀಷನರ್ ತಿಳಿಸಿದ್ದಾರೆ.
ಇನ್ನು ತನಿಖೆಯ ಸಲುವಾಗಿ ಸಿಬ್ಬಂದಿ ಹೊರ ರಾಜ್ಯಕ್ಕೆ ಹೋಗುವುದು ಸದ್ಯಕ್ಕೆ ಸ್ಥಗಿತ ಮಾಡಲಾಗಿದೆ. ಆರೋಗ್ಯದ ಎಚ್ಚರಿಕೆ ಜೊತೆಗೆ ಪರಿಸ್ಥಿತಿಯ ಅನುಗುಣವಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದಿದ್ದಾರೆ.