ಎಲ್ಲಾ ಗ್ರಾಮ ಪಂಚಾಯತ್ ಗಳಿಗೆ ಸಂವಿಧಾನದ ಪ್ರತಿ ಹಂಚಿಕೆ: ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ಎಲ್ಲಾ ಗ್ರಾಮ ಪಂಚಾಯಿತಿಗಳ ಗ್ರಂಥಾಲಯಗಳಿಗೆ ಸಂವಿಧಾನ ಹಾಗೂ  ಗ್ರಾಮ ಪಂಚಾಯಿತಿಯ 73 ಮತ್ತು 74 ನೇ ತಿದ್ದುಪಡಿ, ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಗಳ ಪ್ರತಿಗಳನ್ನು ದೊಡ್ಡ ಪ್ರಮಾಣದಲ್ಲಿ ಕಳಿಸಿ ಅಲ್ಲಿಯೂ ಸಂವಿಧಾನಬದ್ಧ ಆಡಳಿತ ನಡೆಸುವುದು ನಮ್ಮ ಆಶಯವಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

- Advertisement -

ಅವರು ಇಂದು ಸಂವಿಧಾನ ದಿನದ ಅಂಗವಾಗಿ ವಿಧಾನಸೌಧದ ಮುಂಭಾಗದಲ್ಲಿರುವ ಡಾ:ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂವಿಧಾನದ ಸ್ಫೂರ್ತಿ ಗ್ರಾಮೀಣ ಮಟ್ಟದಲ್ಲಿ ಆಗಬೇಕೆನ್ನುವುದು ನಮ್ಮ ಉದ್ದೇಶ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು   ಸಂವಿಧಾನ ನನಗೆ ಧರ್ಮಗ್ರಂಥ ಎಂದು ಹೇಳಿದ್ದರು. ಅದನ್ನು ಅಕ್ಷರಶಃ ನಾವೆಲ್ಲರೂ ಪಾಲನೆ ಮಾಡುತ್ತಿದ್ದೇವೆ ಎಂದರು.  ಸಂವಿಧಾನದ ಪ್ರಕಾರ ನಡೆದುಕೊಳ್ಳುವ ವಚನ ಬೋಧನಾ ವಿಧಿಯನ್ನು ಇಂದು ಹಮ್ಮಿಕೊಂಡಿದ್ದು, ಸಂವಿಧಾನವನ್ನು  ಅದರ ಒಟ್ಟು ರೂಪದಲ್ಲಿ ಆಚರಣೆಗೆ  ತರುವ ಉದ್ದೇಶ ನಮ್ಮದು. ಅಧಿಕಾರ ವಿಕೇಂದ್ರೀಕರಣ ಆಗಿದೆ, ಇನ್ನಷ್ಟು ಆಗಬೇಕಿದೆ ಎಂದರು.

- Advertisement -

ಸಂವಿಧಾನ ಶಾಶ್ವತ ಕೊಡುಗೆ

ಭಾರತದ ಸಂವಿಧಾನ ದಿನಾಚರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಸಂವಿಧಾನ ರಚನೆಯಾಗಿ ಭಾರತ ಸರ್ವ ಸ್ವತಂತ್ರ ಒಕ್ಕೂಟ ರಾಷ್ಟ್ರವಾಗಿ, ಸಂವಿಧಾನಬದ್ಧವಾದ ಗಣತಂತ್ರವಾಗಿ  ಕೆಲಸ ಮಾಡಲು ಪ್ರಾರಂಭಿಸಿತು. ಈ ದಿನದಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಅತ್ಯಂತ ಆದರ ಗೌರವ ಗಳಿಂದ ನೆನಪು ಮಾಡಿಕೊಳ್ಳುತ್ತೇವೆ. ಅವರ ಅಧ್ಯಕ್ಷತೆಯಲ್ಲಿ ರಚನೆಯಾದ  ಸಂವಿಧಾನ ರಚನಾ ಸಮಿತಿ, ಪ್ರಜಾಪ್ರಭುತ್ವಕ್ಕೆ ಶಾಶ್ವತ ಕೊಡುಗೆಯಾಗಿ ಸಂವಿಧಾನ ವನ್ನು ನೀಡಿದ್ದಾರೆ. ಹಲವಾರು ದೇಶಗಳ ಸಂವಿಧಾನಗಳನ್ನು ಅಭ್ಯಾಸ ಮಾಡಿ ಭಾರತಕ್ಕೆ ಲಿಖಿತ ರೂಪದ ಸಂವಿಧಾನವನ್ನು ಕೊಟ್ಟಿದ್ದಾರೆ. ಬ್ರಿಟನ್ ನಲ್ಲಿ ಇಂದಿಗೂ ಅಲಿಖಿತ ಸಂವಿಧಾನ ಇದೆ. ಇದರಲ್ಲಿ ಭಾರತದ ಏಕತೆ, ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ ಎಲ್ಲವೂ ಕೂಡ ಎಲ್ಲಾ ಆಯಾಮಗಳಲ್ಲಿ ನೋಡಿ ರಚನೆಯಾಗಿದ್ದರಿಂದ 75 ವರ್ಷ ಯಶಸ್ವಿ ಪ್ರಜಾಪ್ರಭುತ್ವ ವನ್ನು ಸಂವಿಧಾನಬದ್ಧವಾಗಿ ನಡೆಸಲು ಸಾಧ್ಯವಾಗಿದೆ. ಎಲ್ಲಾ ಕಾನೂನು ಗಳು ಸಂಬಿಧಾನಬದ್ಧವಾಗಿ ನಡೆಯಬೇಕಾಗಿರುವುದು ಭಾರತ ಪ್ರಜಾಪ್ರಭುತ್ವದ ಮೂಲ ಮಂತ್ರವಾಗಿದೆ ಎಂದರು.

ಸಂವಿಧಾನದಂತೆ ನಡೆದುಕೊಳ್ಳಬೇಕು

ಕಾರ್ಯಾಂಗ, ಶಾಸಕಾಂಗ, ನ್ಯಾಯಾಂಗ ,ಪತ್ರಿಕಾ ರಂಗಗಳು ಸಂವಿಧಾನಬದ್ಧವಾಗಿ ನಡೆದುಕೊಳ್ಳಬೇಕಿದೆ. ಭಾರತದಲ್ಲಿ ಕಾನೂನು ಸುವ್ಯವಸ್ಥೆ, ನ್ಯಾಯ ಮತ್ತು ಶಾಂತಿ ಎಲ್ಲವೂ ನಡೆಸಲು ಸಾಧ್ಯವಾಗಿದೆ. ಇಂಥ ಮಹಾನ್ ಸಂವಿಧಾನವನ್ನು ನೀಡಿದ್ದಾರೆ. ಇದು ಅತ್ಯಂತ ಜೀವಂತಿಕೆ ಇರುವ ಸಂವಿಧಾನವಾಗಿದ್ದು, ಕಾಲ ಕಾಲಕ್ಕೆ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಿಗನುಗುಣವಾಗಿ ಸಂವಿಧಾನವನ್ನು ತಿದ್ದುಪಡಿ ಮಾಡುವ ಹಾಗೂ ಹೊಸ ಹೊಸ ಸಂಶೋಧನೆಗಳ ಮೂಲಕ ಸಂವಿಧಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮಾಡುವ ಅವಕಾಶವನ್ನು ಅಂಬೇಡ್ಕರ್ ಅವರು ಮಾಡಿಕೊಟ್ಟಿದ್ದಾರೆ. ಹೀಗಾಗಿ ಕಾಲಕಾಲಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಪರಿಪೂರ್ಣತೆಯಿಂದ ಕೂಡಿರುವ ಸಂವಿಧಾನ, ಮಾನವ ಹಕ್ಕುಗಳ ರಕ್ಷಣೆ ಮಾಡುವ, ವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ, ಸಮಾನತೆಯನ್ನು ಸಾರುವ ಸಂವಿಧಾನವನ್ನು ನಾವೆಲ್ಲರೂ ಗೌರವಿಸಿ, ಅದರಂತೆ ನಡೆಯಬೇಕು ಎಂದರು.

Join Whatsapp