ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುವ ಭ್ರಷ್ಟ ಪೊಲೀಸರು: ಆರಗ ಜ್ಞಾನೇಂದ್ರ

Prasthutha: December 4, 2021

ಬೆಂಗಳೂರು: ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ನೀಡಿರುವ ವೀಡಿಯೋ ಭಾರೀ ವೈರಲಾಗಿದೆ.

‘ಪೊಲೀಸರು ಭ್ರಷ್ಟರಾಗಿದ್ದಾರೆ. ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ’ ಎಂದು ಗೃಹ ಸಚಿವರು ಆರಕ್ಷಕರನ್ನು ತರಾಟೆಗೆ ತೆಗೆದುಕೊಂಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಿಸಿದ ಸಭೆಯಲ್ಲಿ ಗೃಹ ಸಚಿವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಜತೆ ದೂರವಾಣಿ ಮೂಲಕ ಮಾತನಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.

ಜಾನುವಾರು, ಗೋ ಸಾಗಾಟ ವಿಚಾರದಲ್ಲಿ ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ಇಡೀ ಚಿಕ್ಕಮಗಳೂರು ಜಿಲ್ಲೆ ನಿಮ್ಮದು. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದ್ದೇವೆ. ಯಾರಿಗೂ ಕಡಿಮೆ ಮಾಡಿಲ್ಲ. ಆದ್ರೆ ಇವರಿಗೆಲ್ಲ ಸಂಬಳದಲ್ಲಿ ಬದುಕಬೇಕೆಂದಿಲ್ಲ. ಇಂಥವರೆಲ್ಲ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಸಮವಸ್ತ್ರ ಬಿಚ್ಚಿಟ್ಟು ಎಲ್ಲಾದರೂ ಹೋಗಿ ಸಾಯಲಿ ಅಥವಾ ಮಣ್ಣು ಹೊರಲಿ. ಇವರನ್ನೆಲ್ಲ ನಂಬಿಕೊಂಡು ಜನ ಬದುಕುವುದು ಹೇಗೆ? ಇಲ್ಲಿ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗುತ್ತಾರೆ. ಎಲ್ಲ ಪೊಲೀಸರು ಹಾಳಾಗಿ ಹೋಗಿದ್ದಾರೆ’ ಎಂದು ಕಿಡಿಕಾರಿದ್ದಾರೆ.

ಬಳಿಕ ಈ ಕುರಿತು ಸ್ಪಷ್ಟನೆ ನೀಡಿದ ಸಚಿವರು, ‘ಎಲ್ಲ ಪೊಲೀಸರನ್ನು ಉದ್ದೇಶಸಿ ಆ ಹೇಳಿಕೆ ನೀಡಿಲ್ಲ. ಅಕ್ರಮ ಗೋ ಸಾಗಾಟ ಮಾಡುವವರೊಂದಿಗೆ ಶಾಮೀಲಾದವರನ್ನು ಮಾತ್ರ ಉಲ್ಲೇಖಿಸಿ ಹಾಗೆ ಮಾತನಾಡಿದ್ದೆ’ ಎಂದು ಹೇಳಿದ್ದಾರೆ.

‘ಗೃಹಸಚಿವನಾಗಿ ನಾನು ಪೊಲೀಸರನ್ನು ಗೌರವಿಸುತ್ತೇನೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಮೊನ್ನೆಯಷ್ಟೇ ನನ್ನ ಕ್ಷೇತ್ರದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದವರ ಮೇಲೆ ಹಲ್ಲೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಕೆಲ ಪೊಲೀಸರನ್ನು ಉಲ್ಲೇಖಿಸಿದ್ದೆ’ ಎಂದು ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!