ಶಾಸಕ ವಿಶ್ವನಾಥ್ ಕೊಲೆಗೆ ಸಂಚು: ವಿಚಾರಣೆಗೆ ಹಾಜರಾದ ಗೋಪಾಲಕೃಷ್ಣ

Prasthutha|

ಬೆಂಗಳೂರು: ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್ ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ಪ್ರಕರಣದ ವಿಚಾರಣೆಗಾಗಿ ರಾಜಾನುಕುಂಟೆ ಪೊಲೀಸ್ ಠಾಣೆಗೆ ಶನಿವಾರ ಬೆಳಿಗ್ಗೆ ಹಾಜರಾಗಿದ್ದಾರೆ.

- Advertisement -


ಪ್ರಕರಣದ ಸಂಬಂಧಿಸಿದಂತೆ ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನನ್ನು ಪಡೆದಿರುವ ಗೋಪಾಲಕೃಷ್ಣ
ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಪ್ರಕರಣದ ಸಂಬಂಧಿಸಿದಂತೆ ಕುಳ್ಳ ದೇವರಾಜ್ ನನ್ನು ಬಂಧಿಸಿ ವಿಚಾರಣೆ ನಡೆಸಿದ ಬೆನ್ನಲ್ಲೇ ನೋಟೀಸ್ ಜಾರಿಗೊಳಿಸಿದ್ದರಿಂದ ಬಂಧನದ ಭೀತಿಯಲ್ಲಿದ್ದ ಗೋಪಾಲಕೃಷ್ಣ ಅವರು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದಿದ್ದರು.


ಕೊಲೆ ಸಂಚು ಸಂಬಂಧ ಶಾಸಕ ಎಸ್.ಆರ್. ವಿಶ್ವನಾಥ್ ಅವರು ರಾಜಾನುಕುಂಟೆ ಪೊಲೀಸ್ ಠಾಣೆಗೆ ಹಾಜರಾಗಿ ಕುಳ್ಳ ದೇವರಾಜ್ ನೀಡಿದ್ದ ಕ್ಷಮಾಪಣೆ ಪತ್ರ ಮತ್ತು ಸಂಚು ನಡೆಸಿದ ವಿಡಿಯೋ ಇರುವ ಪೆನ್ ಡ್ರೈವ್ ಅನ್ನು ನೀಡಿದ್ದರು. ಶಾಸಕರು ನೀಡಿದ 30 ನಿಮಿಷಗಳ ವಿಡಿಯೋವನ್ನು ಪರಿಶೀಲನೆ ನಡೆಸಿರುವ ಪೊಲೀಸರು ವಿಚಾರಣೆಗಾಗಿ ಗೋಪಾಲಕೃಷ್ಣರಿಗೆ ನೋಟೀಸ್ ಜಾರಿಗೊಳಿಸಿದ್ದರು.

- Advertisement -


ಅದರಂತೆ ಬೆಳಿಗ್ಗೆ 9 ಗಂಟೆಗೆ ಗೋಪಾಲಕೃಷ್ಣ ಪೊಲೀಸ್ ಠಾಣೆಗೆ ತೆರಳಿದ್ದು, ದೊಡ್ಡಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ನಾಗರಾಜ್ ನೇತೃತ್ವದಲ್ಲಿ ವಿಚಾರಣೆ ನಡೆಸಿದರು. ವಿಡಿಯೋ ನೋಡಿರುವ ಪೊಲೀಸರು ಪ್ರಶ್ನಾವಳಿಯನ್ನ ಸಿದ್ಧಪಡಿಸಿಕೊಂಡು ಪ್ರಕರಣದ ಆರೋಪಿಯಾಗಿರುವ ಗೋಪಾಲಕೃಷ್ಣರನ್ನು ಸುದೀರ್ಘ ವಿಚಾರಣೆ ನಡೆಸಿದರು ಎಂದು ತಿಳಿದುಬಂದಿದೆ.

Join Whatsapp