ರಾಜ್ಯದ ಹಲವೆಡೆ ಭಾರೀ ಮಳೆ, ಜನ ಜೀವನ ಅಸ್ತವ್ಯಸ್ತ; ದ.ಕ., ಉಡುಪಿಯಲ್ಲಿ ಮುಂದುವರಿದ ವರ್ಷಧಾರೆ

Prasthutha|

ಬೆಂಗಳೂರು, ಜು.15; ಪೂರ್ವ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕೊಡಗಿನಲ್ಲಿ ಭೂಕುಸಿತದ ಭೀತಿ ಉಂಟಾಗಿದ್ದರೆ ಕರಾವಳಿ ಮಲೆನಾಡು ಪ್ರದೇಶದಲ್ಲಿ ಹಳ್ಳ ಕೊಳ್ಳ ತುಂಬಿ ಹರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

- Advertisement -


ಇನ್ನೂ 5 ದಿನಗಳ ಕಾಲ ಭಾರೀ ಪ್ರಮಾಣದಲ್ಲಿ ಮಳೆ ಮುಂದುವರೆಯಲಿದ್ದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಆತಂಕ ವಾತಾವರಣ ಉಂಟಾಗಿದೆ. ಭಾರೀ ಮಳೆಯ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆಯು ಹಲವೆಡೆ ರೆಡ್ ಅಲರ್ಟ್ ಘೋಷಿಸಿದೆ.
ಈಗಾಗಲೇ ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವೆಡೆ ರೆಡ್, ಯೆಲ್ಲೋ, ಅರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಮುಂದಿನ 5 ದಿನಗಳ ಕಾಲ ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿಯಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್​. ಪಾಟೀಲ್​ ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯಲಿದ್ದು, ತುಂತುರು ಮಳೆಯಾಗಲಿದೆ. ಜು.17 ಮಳೆ ಆರ್ಭಟ ಜೋರಾಗಿರಲಿದೆ.


ಉತ್ತರ ಕನ್ನಡ. ಉಡುಪಿ, ದಕ್ಷಿಣ ಕನ್ನಡ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗಲಿದ್ದು, ಜು. 16ರಂದು ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜುಲೈ 15 ಮತ್ತು 17ರಂದು ಈ ಪ್ರದೇಶಗಳಲ್ಲಿ ಆರೆಂಜ್​ ಅಲರ್ಟ್​ ಘೋಷಿಸಲಾಗಿದೆ.

- Advertisement -


ಮೀನುಗಾರರಿಗೆ ಎಚ್ಚರಿಕೆ: ಕರಾವಳಿ ಪ್ರದೇಶದ ಮೀನುಗಾರರಿಗೂ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿ ಕಟ್ಟೆಚ್ಚರ ವಹಿಸುವಂತೆ ಕರಾವಳಿ ಪ್ರದೇಶದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ.
ದಕ್ಷಿಣ ಕನ್ನಡದ ಪ್ರಮುಖ ನದಿಗಳಾದ ಕುಮಾರಧಾರಾ ಮತ್ತು ನೇತ್ರಾವತಿ ತುಂಬಿ ಹರಿಯುತ್ತಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಭಾರೀ ಮಳೆಯಾಗುತ್ತಿದ್ದು, ಘಟ್ಟ ಪ್ರದೇಶಗಳಿಂದ ಹರಿದು ಬರುವ ಕುಮಾರಧಾರಾ ನದಿಯಲ್ಲಿ ನೀರಿನ ಹರಿವು ಭಾರೀ ಹೆಚ್ಚಳವಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿ ಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ.
ಕೊಡಗಿನಲ್ಲಿ ಭೀತಿ: ಕೊಡಗು ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಬಿಟ್ಟುಬಿಡದೆ ಮಳೆಯಾಗುತ್ತಿದ್ದು ಭಾಗಮಂಡಲ, ನಾಪೋಕ್ಲು, ಮಡಿಕೇರಿ, ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಇದರಿಂದಾಗಿ ಕಾವೇರಿ ನದಿ ತುಂಬಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇನ್ನು ಮಡಿಕೇರಿ ಭಾಗದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ 24 ಗಂಟೆಯಲ್ಲಿ ಬರೋಬ್ಬರಿ 85 ಮಿಲಿಮೀಟರ್ ಮಳೆ ಸುರಿದಿದೆ. ಮಡಿಕೇರಿ ನಗರದಲ್ಲಿ ಆಕಾಶವಾಣಿ ಕೇಂದ್ರದ ಬಳಿ ಭೂಕುಸಿತವಾಗಿದೆ.


ಟವರ್ ಕುಸಿತದ ಭೀತಿ: ಆಕಾಶವಾಣಿ ಟವರ್ ನಿಂದ ಕೇವಲ 5 ಅಡಿ ದೂರದಲ್ಲಿ ಭೂಕುಸಿತವಾಗಿರುವುದರಿಂದ ಟವರ್ ಕುಸಿಯುವ ಭೀತಿ ಎದುರಾಗಿದೆ. ಸ್ಥಳಕ್ಕೆ ಮಡಿಕೇರಿ ನಗರಸಭೆ ಆಯುಕ್ತ ರಾಮದಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಟವರ್ ಪಕ್ಕದಲ್ಲಿ ಭೂಕುಸಿತ ಆಗುವುದಕ್ಕೆ ಅಧಿಕಾರಿಗಳೇ ಕಾರಣ ಎಂದು ಕೊಡಗು ರಕ್ಷಣಾ ವೇದಿಕೆ ಅಧ್ಯಕ್ಷ ಪವನ್ ಪೆಮ್ಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ 3 ದಿನ ಮಳೆ

ಬೆಂಗಳೂರಿನಲ್ಲೂ ಕೂಡ ಮುಂದಿನ ಎರಡು ದಿನ ಮಳೆಯಾಗಲಿದ್ದು ಗರಿಷ್ಠ ಉಷ್ಣಾಂಶ 24 ಡಿಗ್ರಿ ಸೆಂಟಿಗ್ರೇಡ್​, ಕನಿಷ್ಠ ಉಷ್ಣಾಂಶ 20 ಡಿಗ್ರಿ ಇರಲಿದೆ.
ಹವಾಮಾನ ಇಲಾಖೆ ಮಾಹಿತಿ ನೀಡಿರುವ ಪ್ರಕಾರ ನಿನ್ನೆ ಸಂಜೆ 5.30ರವರೆಗೆ ಬೆಂಗಳೂರಿನಲ್ಲಿ ಒಟ್ಟಾರೆ 4.6 ಎಂಎಂ ಮಳೆಯಾಗಿದ್ದು, ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 13.7 ಎಂಎಂ ಮಳೆಯಾಗಿದೆ ಎಂದು ತಿಳಿಸಿದೆ. 
ಬಿಬಿಎಂಪಿ ಕಂಟ್ರೋಲ್ ರೂಮ್ ಸಿಬ್ಬಂದಿಗಳು ಮಾತನಾಡಿ, ಮರ ಕುಸಿದು ಬಿದ್ದಿರುವ, ನೀರು ತುಂಬಿರುವ ಕುರಿತು ಯಾವುದೇ ದೂರುಗಳೂ ಬಂದಿಲ್ಲ ಎಂದು ಮಾಹಿತಿ ನೀಡಿದ್ದಾರೆ. 



Join Whatsapp