ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಘೋಷಣೆ ಮಾಡಿದ್ದಾರೆ.
ಸಂಜೆ ಶಿವಮೊಗ್ಗದ ಬಂಜಾರ ಕನ್ವೆನ್ಷನ್ ಹಾಲ್ನಲ್ಲಿ ನಡೆಸಿದ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಈಶ್ವರಪ್ಪ, ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಹೋಗುವುದಿಲ್ಲ ಎನ್ನುತ್ತಲ್ಲೇ ಶಿವಮೊಗ್ಗ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಬಹಿರಂಗವಾಗಿಯೇ ಗುಡುಗಿದ್ದಾರೆ.
ಒಬ್ಬ ಮಗ ಎಂಪಿ, ಇನ್ನೊಬ್ಬ ಶಾಸಕ ಜೊತೆಗೆ ಜಿಜೆಪಿ ರಾಜ್ಯಾಧ್ಯಕ್ಷ, ನನ್ನ ಎದೆ ಬಗೆದರೆ ರಾಮ ಮತ್ತು ಮೋದಿ. ಆದರೆ ಯಡಿಯೂರಪ್ಪ ಎದೆ ಬಗೆದರೆ ಇಬ್ಬರು ಮಕ್ಕಳು ಮತ್ತು ಶೋಭಾ ಎಂದು ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ಕಾಂಗ್ರೆಸ್ ಕುಟುಂಬ ರಾಜಕಾರಣದ ವಿರುದ್ಧ ಇದ್ದವರು. ಮೋದಿ ವಿರೋಧಿ ನಾನಲ್ಲ. ಇವತ್ತು ಅವರು ವಿಶ್ವ ನಾಯಕ. ರಾಜ್ಯದ ಬಿಜೆಪಿ ಯಲ್ಲಿ ಕೂಡ ಕಾಂಗ್ರೆಸ್ ಸಂಸ್ಕೃತಿ ಬೆಳೆಯುತ್ತಿರುವುದು ದೌರ್ಭಾಗ್ಯ ಎಂದರು.
ಕಳೆದ ವಿಧಾನಸಭೆ ಚುನಾವಣೆ ವೇಳೆ ನನಗೆ ಆಗಿತ್ತು. ಅದನ್ನು ಸರಿಪಡಿಸುವ ಭರವಸೆ ಪಕ್ಷದ ನಾಯಕರಿಂದ ಸಿಕ್ಕಿತ್ತು. ಬಿಎಸ್ ಯಡಿಯೂರಪ್ಪ ಸಹ ಹಾವೇರಿಯಲ್ಲಿ ಕಾಂತೇಶ್ ಗೆ ಟಿಕೆಟ್ ಕೊಡಿಸಿ ಗೆಲ್ಲಿಸುವೆ ಎಂದಿದ್ದರು. ಆದರೆ ಅಲ್ಲಿ ಬೊಮ್ಮಾಯಿ ಮತ್ತು ಶೋಭಾ ಪರ ಮಾತ್ರ ಹಠ ಹಿಡಿದು ಟಿಕೆಟ್ ಕೊಡಿಸಿದ್ದಾರೆ ಎಂದು ಕಿಡಿಗಾರಿದರು.
ಹೈಕಮಾಂಡ್ ತೀರ್ಮಾನಕ್ಕೆ ಮುನ್ನವೇ ಅವರು ಶೋಭಾಳನ್ನು ಗೆಲ್ಲಿಸುವಂತೆ ಕಾರ್ಯಕರ್ತರಿಗೆ ಸೂಚನೆಯನ್ನು ಕೊಟ್ಟಿದ್ದರು . ಹೇಗೆ ಕೊಟ್ಟರು ಎಂದು ಬಿಎಸ್ವೈ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು.
ಬೊಮ್ಮಾಯಿಗೆ ಇಷ್ಟವಿಲ್ಲದಿದ್ದರೂ ಟಿಕೆಟ್ ಕೊಡಿಸಿದ್ದಾರೆ. ಸಂಸದೆ ಶೋಭಾ ವಿರುದ್ಧ ಕೂಗೆದ್ದರೂ ಟಿಕೆಟ್ ಕೊಡಿಸಿದ್ದಾರೆ. ಸದಾನಂದ ಗೌಡ, ಸಿ.ಟಿ.ರವಿ, ಕಟೀಲು, ಪ್ರತಾಪ ಸಿಂಹ ಅವರು ಹಿಂದುತ್ವ ಪರ ಧ್ವನಿ ಎತ್ತಿದ್ದೇ ಟಿಕೆಟ್ ತಪ್ಪಲು ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.