ಮಂಗಳೂರು: ಕಳೆದ ವಾರ ಆಯುಧ ಪೂಜೆಯ ದಿನದಂದು ತನ್ನ ಕಾರ್ಯಕರ್ತರಿಗೆ ತ್ರಿಶೂಲ ವಿತರಿಸಿ ಜನಸಾಮಾನ್ಯರನ್ನು ಭಯಬೀತಗೊಳಿಸಿದ್ದ ಸಂಘಪರಿವಾರಕ್ಕೆ ಇದೀಗ SDPI ಸಡ್ಡು ಹೊಡೆದಿದೆ. ಹಿಂಸೆ ಪ್ರತಿಯಾಗಿ ಸಂವಿಧಾನದ ಸಂದೇಶ ನೀಡುವ ಉದ್ದೇಶದಿಂದ ಸೋಮವಾರ (ಅ.25) ಮಂಗಳೂರಿನಲ್ಲಿ ಸಂವಿಧಾನ ದೀಕ್ಷೆ ಕಾರ್ಯಕ್ರಮ ಆಯೋಜಿಸಿದೆ.
ಸಂಘಪರಿವಾರ ತ್ರಿಶೂಲ ದೀಕ್ಷೆಯನ್ನು ನಡೆಸಿರುವ ಮಂಗಳೂರಿನಲ್ಲೇ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ಇಂದು ಸಂವಿಧಾನ ದೀಕ್ಷೆ ಕಾರ್ಯಕ್ರಮ ನಡೆಯಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಈಗಾಗಲೇ ಹಲವು ಪ್ರಗತಿಪರ ಸಂಘಟನೆಗಳು ಸಂವಿಧಾನ ದೀಕ್ಷೆ ಕಾರ್ಯಕ್ರಮಕ್ಕೆ ಬೆಂಬಲ ಘೋಷಿಸಿವೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ SDPI ರಾಜ್ಯ ಮುಖಂಡ ಬಿ ಆರ್ ಭಾಸ್ಕರ್ ಪ್ರಸಾದ್ ಆಗಮಿಸಲಿದ್ದಾರೆ. ಸಂವಿಧಾನ ದೀಕ್ಷೆಯ ವೇಳೆ ಜಾತ್ಯತೀತ, ಪ್ರಜಾಪ್ರಭುತ್ವ, ಮಾನವ ಹಕ್ಕುಗಳ ರಕ್ಷಣೆಗೆ ಪ್ರತಿಜ್ಞೆ ನಡೆಯಲಿದೆ. ಸಂವಿಧಾನ ದೀಕ್ಷೆ ಕಾರ್ಯಕ್ರಮವು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಸಂಜೆ 4ಗಂಟೆಗೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.