ತುಮಕೂರು ಪ್ರಚೋದನಾಕಾರಿ ಭಾಷಣ; ಬಜರಂಗದಳದ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಯೋಗದಿಂದ ಮನವಿ

Prasthutha|

ಬೆಂಗಳೂರು: ಇತ್ತೀಚೆಗೆ ತುಮಕೂರಿನಲ್ಲಿ ಬಂದ್ ಹೆಸರಿನಲ್ಲಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಪ್ರಚೋದನಾಕಾರಿ ಭಾಷಣಗೈದು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಜಾತಿ ಧರ್ಮಗಳ ಮಧ್ಯೆ ವಿಷಬೀಜ ಬಿತ್ತುವ ಪ್ರಯತ್ನ ಮಾಡಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ನಿಯೋಗವು ಸೋಮವಾರ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮನವಿ ಸಲ್ಲಿಸಿದೆ.

- Advertisement -

ಮಾಜಿ ಗೃಹ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿಯವರ ನೇತೃತ್ವದಲ್ಲಿ ಪೊಲೀಸ್ ಮಹಾನಿರ್ದೇಶಕರಿಗೆ ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿರುವುದನ್ನು ಯಥಾವತ್ತಾಗಿ ಕೆಳಗೆ ನೀಡಲಾಗಿದೆ.

ಮನವಿ ಪತ್ರದ ಸಾರಾಂಶ

- Advertisement -

ಕೆಲವು ದಿನಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿ ಗೇಟ್ ನಲ್ಲಿ ಎರಡು ಗುಂಪುಗಳ ನಡುವೆ ಜಗಳ ನಡೆದಿತ್ತು. ಆ ಜಗಳದಲ್ಲಿ ಭಾಗಿಯಾಗಿದ್ದ ಎಲ್ಲಾ ತಪ್ಪಿತಸ್ಥರ ಮೇಲೆ ಜಿಲ್ಲಾ ಪೊಲೀಸರು ಕಠಿಣ ಕ್ರಮ ಜರುಗಿಸಿ ಆರೋಪಗಳನ್ನು ಬಂಧಿಸಿ ಅವರ ವಿರುದ್ಧ 307 ಸೆಕ್ಷನ್ ವಿಧಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಆದರೂ ತುಮಕೂರು ನಗರದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಇನ್ನಿತರ ಸಂಘಟನೆಗಳ ಮುಖ್ಯಸ್ಥರು ಮತ್ತು ಜವಾಬ್ದಾರಿಯುತ ಸ್ಥಾನದಲ್ಲಿರುವ ತುಮಕೂರು ನಗರದ ಹಾಲಿ ಶಾಸಕರು ದಿನಾಂಕ 21.10.2021 ರಂದು ಬಂದ್ ಗೆ ಬೆಂಬಲ ನೀಡಿದ್ದಾರೆ. ಅಲ್ಲದೆ ಕೋಮು ಪ್ರಚೋದಕ ಭಾಷಣ ಮಾಡಿ, ಸ್ವಾತಂತ್ರ್ಯ ಹೋರಾಟಗಾರರಾದ ಟಿಪ್ಪು ಸುಲ್ತಾನ್ ಅವರ ಬಗ್ಗೆ ಅವಾಚ್ಯ ಪದ ಬಳಕೆ ಮಾಡುವ ಮೂಲಕ ನಗರದಲ್ಲಿನ ಶಾಂತಿಯುತ ವಾತಾವರಣ ಕದಡಿ ಕೋಮು ಗಲಭೆ ಹಬ್ಬುವಂತೆ ಪ್ರಚೋದಿಸಿದ್ದಾರೆ.

ಅಕ್ಟೋಬರ್ 22ರಂದು ಬಂದ್ ಗೆ ಬೆಂಬಲ ನೀಡಿದ್ದಲ್ಲದೇ ಕೋಮು ಪ್ರಚೋದನೆ ಭಾಷಣ ಮಾಡಿರುವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನರ ಬಗ್ಗೆ ಅವಾಚ್ಯ ಶಬ್ದ ಬಳಕೆ ಮಾಡುವ ಮೂಲಕ ನಗರದಲ್ಲಿನ ಶಾಂತಿಯುತ ವಾತಾವರಣ ಕದಡಿ ಕೋಮು ಗಲಭೆ ಹಬ್ಬಿಸುಂತೆ ಪ್ರಚೋದನೆ ಮಾಡಿರುವವರ ವಿರುದ್ಧ ಕೂಡಲೇ FIR ದಾಖಲು ಮಾಡಿ ತನಿಖೆಗೆ ಒಳಪಡಿಸುವ ಮೂಲಕ ಕಠಿಣ ಕ್ರಮ ಜರುಗಿಸಿ ಇನ್ನೊಮ್ಮೆ ನಗರದಲ್ಲಿ ಇಂತಹ ಅಶಾಂತಿಯ ವಾತಾವರಣ ಸೃಷ್ಟಿಸುವುದನ್ನು ತಡೆಗಟ್ಟಬೇಕೆಂದು ಈ ಮೂಲಕ ತಮ್ಮಲ್ಲಿ ಮನವಿ ಮಾಡುತ್ತೇವೆ.

ಇದೇ ರೀತಿ ಕೋಮು ಸಾಮರಸ್ಯ ಕದಡುವ, ಕಾನೂನು ಸುವ್ಯವಸ್ಥೆ ಹಾಳು ಮಾಡುವ, ಅಲ್ಪಸಂಖ್ಯಾತರ ಮೇಲೆ ಹಲ್ಲೆ ಮಾಡುವ ಘಟನೆಗಳು ರಾಜ್ಯದ ಇತರ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಕರಾವಳಿಯ ಜಿಲ್ಲೆಗಳಲ್ಲಿ ಅನೈತಿಕ ಪೊಲೀಸ್ ಗಿರಿ, ಗೋರಕ್ಷಣೆ ಇತ್ಯಾದಿಗಳ ನೆಪದಲ್ಲಿ ದಲ್ಲೆ, ದಾಳಿ ಹಾಗೂ ಕೋಮು ಹಿಂಸೆಯ ಘಟನೆಗಳು ಅವ್ಯಾಹತವಾಗಿ ನಡೆಯುತ್ತಿದೆ.

ಈ ವರ್ಷ ಮಾಧ್ಯಮಗಳಲ್ಲಿ ವರದಿಯಾದ ಇಂತಹ ಪ್ರಕರಣಗಳ ಸಂಖ್ಯೆಯೇ 88 ಕ್ಕಿಂತ ಹೆಚ್ಚು ಇನ್ನು ದೂರು ದಾಖಲಾಗದ ಮಾಧ್ಯಮಗಳಲ್ಲಿ ಸುದ್ದಿಯಾಗದ ಘಟನೆಗಳ ಲೆಕ್ಕವಿಲ್ಲ. ಇತ್ತೀಚೆಗೆ ಮಂಗಳೂರು ಸಮೀಪದ ಸುರತ್ಕಲ್ ನಲ್ಲಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಪೊಲೀಸ್ ಅಧಿಕಾರಿಯೊಬ್ಬರ ಎದುರಲ್ಲೇ ಅದರಲ್ಲಿದ್ದ ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ತಂಡ ಹಲ್ಲೆ ಮಾಡಿದೆ. ಇಷ್ಟೆಲ್ಲಾ ಆದರೂ ಸಾರ್ವಜನಿಕರ ಒತ್ತಡ ಬಂದಮೇಲೆ ಆ ದುಷ್ಕರ್ಮಿಗಳನ್ನು ಬಂಧಿಸಿ ಪೊಲೀಸ್ ಠಾಣೆ ಯಲ್ಲೇ ಜಾಮೀನು ನೀಡಿ ಬಿಡುಗಡೆಗೊಳಿಸಲಾಗಿದೆ. ಕ್ಷುಲ್ಲಕ ಕಾರಣವೊಡ್ಡಿ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಯುವಕರ ಮೇಲೆ ಹಲ್ಲೆ ನಡೆಸುವ ಘಟನೆಗಳು ಅಲ್ಲಿ ನಡೆಯುತ್ತಲೇ ಇದೆ. ಉಡುಪಿ ಜಿಲ್ಲೆಯ ಗಂಗೊಳ್ಳಿ ಎಂಬಲ್ಲಿ ಹಲವು ವರ್ಷ ಹಳೆಯ ವಿಡಿಯೋ ತುಣುಕೊಂದನ್ನು ದುರುಪಯೋಗಪಡಿಸಿಕೊಂಡ ಸಂಘಪರಿವಾರ ಅಲ್ಲಿನ ಹಿಂದೂ-ಮುಸ್ಲಿಮರ ನಡುವೆ ದ್ವೇಷ ಹಾರಡುವ ಪ್ರಯತ್ನ ಮಾಡಿ ಕೋಮು ಹಿಂಸೆಗೆ ಪ್ರಚೋದನೆ ನೀಡಿವೆ.

ರಾಜ್ಯದ ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದಿರುವ ಅರ್ಬಾಝ್ ಎಂಬ ಯುವಕನ ಬರ್ಬರ ಕೊಲೆ ಪ್ರಕರಣದಿಂದಾಗಿ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. ಕೇವಲ ಇನ್ನೊಂದು ಧರ್ಮದ ಯುವತಿಯನ್ನು ಪ್ರೀತಿಸಿದ ಎಂಬ ಕಾರಣಕ್ಕೆ ಯುವಕನ ಕೊಲೆ ನಡೆದಿದೆ. ರಾಮ ಸೇನೆ ಸಂಘಟನೆಯ ನಾಯಕನೇ ಆ ಕೊಲೆಯ ಮುಖ್ಯ ಆರೋಪಿಯಾಗಿದ್ದಾನೆ. ಧರ್ಮದ ಹೆಸರಿನಲ್ಲಿ ಅನೈತಿಕ ಗೂಂಡಾ ಕಾರ್ಯಾಚರಣೆ ನಡೆಸುವ ಇಂತಹ ಕೋಮುವಾದಿ ಸಂಘಟನೆಗಳನ್ನು ಹಾಗೂ ನಾಯಕರನ್ನು ಪ್ರಾರಂಭಿಕ ಹಂತದಲ್ಲೇ ಕಠಿಣ ಕಾನೂನು ಕ್ರಮಗಳ ಮೂಲಕ ಮಟ್ಟ ಹಾಕಿದ್ದರೆ ಪರಿಸ್ಥಿತಿ ಈ ಹಂತಕ್ಕೆ ಬರುತ್ತಿರಲಿಲ್ಲ.

ಈ ಮೇಲೆ ವಿವರಿಸಿದ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುವ ಮುನ್ನ ಇಂತಹ ದುಷ್ಟ ಶಕ್ತಿಗಳನ್ನು ನಿಗ್ರಹಿಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಎಲ್ಲಾ ಜಿಲ್ಲೆಗಳ ಪೊಲೀಸರಿಗೆ ಸೂಕ್ತ ನಿರ್ದೇಶನ ನೀಡುವಂತೆ ವಿನಂತಿಸುತ್ತಿದ್ದೇವೆ.

ನಿಯೋಗದಲ್ಲಿ ಎಂ.ಎಲ್.ಸಿ ನಸೀರ್ ಅಹ್ಮದ್, ಸಂಸದ ನಾಸೀರ್ ಹುಸೇನ್, ಶಾಸಕರಾದ ಯುಟಿ ಖಾದರ್, ಜಮೀರ್ ಅಹ್ಮದ್, ಎನ್.ಎ. ಹಾರೀಸ್, ಕನೀಜ್ ಫಾತೀಮಾ, ಮಾಜಿ ಸಭಾಪತಿಗಳಾದ ವಿ.ಆರ್. ಸುದರ್ಶನ್, ವಿಧಾನ ಪರಿಷತ್ ಸದಸ್ಯರಾದ ಪಿ.ಆರ್. ರಮೇಶ್, ಮಾಜಿ ಶಾಸಕ ರಫೀಕ್ ಅಹ್ಮದ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಅಬ್ದುಲ್ ಜಬ್ಬಾರ್ ಮತ್ತಿತರು ಉಪಸ್ಥಿತರಿದ್ದರು.



Join Whatsapp