ಬೆಂಗಳೂರು: ಬಿಜೆಪಿಯಲ್ಲಿ ಮೊ-ಶಾ(ಮೋದಿ-ಅಮಿತ್ ಶಾ) ಜೋಡಿಯ ಮುಂದೆ ಯಾರಿಗೂ ಸ್ವತಂತ್ರವಿಲ್ಲ ಎಂದು ಚುನಾವಣಾ ಪ್ರಚಾರದ ವೇದಿಕೆಯಲ್ಲಿ ಕೋಟಾ ಶ್ರೀನಿವಾಸ ಪೂಜಾರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗದರಿಸಿರುವ ವಿಡಿಯೋವೊಂದನ್ನು ಹಂಚಿಕೊಂಡು ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.
ಉಡುಪಿ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಬಿಜೆಪಿಯ ರೋಡ್ ಶೋ ವೇಳೆ ಅಮಿತ್ ಶಾ ಭಾಷಣ ಮಾಡುತ್ತಿದ್ದರು. ಭಾಷಣವನ್ನು ಕನ್ನಡದಲ್ಲಿ ಅನುವಾದಿಸುವಂತೆ ಸಂಸದ ಪ್ರತಾಪ ಸಿಂಹಗೆ ಅಮಿತ್ ಶಾ ಸೂಚಿಸಿದರು. ಆಗ ನೆರೆದಿದ್ದ ಜನ ಹಿಂದಿಯಲ್ಲೇ ಭಾಷಣ ಮುಂದುವರಿಸುವಂತೆ ಮನವಿ ಮಾಡಿಕೊಂಡರು. ಇದೇ ಸಂದರ್ಭ ಜನರು ಹಿಂದಿಯಲ್ಲೇ ಭಾಷಣ ಕೇಳುತ್ತಿದ್ದಾರೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ಅಮಿತ್ ಶಾಗೆ ಹೇಳಿದ್ದಾರೆ. ಇದಕ್ಕೆ ಗರಂ ಆದ ಅಮಿತ್ ಶಾ, ನನಗೆ ಗೊತ್ತಾಯಿತು ಅಂತ ಗದರಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಕಾರ್ಯಕ್ರಮಕ್ಕೆ ಜನಸೇರಿಸಲು ವಿಫಲರಾದ ಕೋಟಾಗೆ ಅಮಿತ್ ಶಾ ಗದರಿದ್ದಾರೆ ಎಂಬ ಟ್ರೋಲ್ ಗಳು ಸೋಷಿಯಲ್ ಮೀಡಿಯಾಗಳಲ್ಲಿ ಸದ್ದು ಮಾಡುತ್ತಿವೆ.
ಕೋಟಾಗೆ ಶಾ ಗದರಿರುವ ವಿಡಿಯೋವನ್ನು ಹಂಚಿಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿದ್ದು, ಬಿಜೆಪಿಯಲ್ಲಿ ಮೊ-ಶಾ ಜೋಡಿಯ ಮುಂದೆ ಯಾರಿಗೂ ಸ್ವತಂತ್ರವಿಲ್ಲ. ‘ಶಾ’ಭಿಮಾನ ಇರಬೇಕೆ ಹೊರತು ಸ್ವಾಭಿಮಾನ ಇರಕೂಡದು! ಕೋಟಾ ಶ್ರೀನಿವಾಸ ಪೂಜಾರಿಯವರನ್ನು ಚಿಕ್ಕ ಮಕ್ಕಳನ್ನು ಗದರುವಂತೆ ಗದರಿದ ಅಮಿತ್ ಶಾ ಕನ್ನಡಿಗರನ್ನು, ಹಿಂದುಳಿದ ವರ್ಗವನ್ನು ನಿಷ್ಕೃಷ್ಠವಾಗಿ ಕಂಡಿದ್ದಾರೆ. ಬಿಜೆಪಿ ನಾಯಕರನ್ನು ಸೃಷ್ಟಿಸುವುದಿಲ್ಲ, ಅಮಿತ್ ಶಾ ಕಾಲಿನಡಿ ಕೂರುವ ಗುಲಾಮರನ್ನು ಸೃಷ್ಟಿಸುತ್ತದೆ ಎಂಬುದಕ್ಕೆ ಉದಾಹರಣೆ ಇದು ಎಂದು ಟೀಕಿಸಿದೆ.