ಬೆಂಗಳೂರು; ಬಿಟ್ ಕಾಯಿನ್ ಅಕ್ರಮ ಕುರಿತು ಇದೇ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಕಾಲದಲ್ಲೇ ಬಿಟ್ ಕಾಯಿನ್ ಅಕ್ರಮಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಕೊಪ್ಪಳದಲ್ಲಿ ಜನಸ್ವರಾಜ್ ಯಾತ್ರೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರದ ಕನಸು ಭಗ್ನವಾಗಿದೆ. ಅದಕ್ಕಾಗಿಯೇ ಕೆಸರೆರೆಚಾಟ ಮುಂದುವರಿಸಿದೆ. ಅವರ ಕೈಗೇ ಕೆಸರು ಹತ್ತಿದೆ. ಕಾಂಗ್ರೆಸ್ ಕಾಲದಲ್ಲೇ ಬಿಟ್ ಕಾಯಿನ್ ಅವ್ಯವಹಾರ ನಡೆದಿತ್ತು. 2016ರಲ್ಲೇ ತನಿಖೆ ಮಾಡಿದ್ದರೆ ಎಲ್ಲವೂ ಬಹಿರಂಗ ಆಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಕೇವಲ ಮೋಸ, ಸುಳ್ಳು, ವಂಚನೆಯನ್ನೇ ಮಾಡುತ್ತಾ ಬಂದಿದೆ. ಕಾಂಗ್ರೆಸ್ ಕಾಲದಲ್ಲೇ ರಫೇಲ್ ಹಗರಣ ನಡೆದಿದೆ. ಬಿಟ್ ಕಾಯಿನ್ ಕುರಿತು ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಬಿಟ್ ಕಾಯಿನ್ನ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡರು ಇರುವುದನ್ನು ಪತ್ರಿಕೆಗಳೇ ಬರೆದಿವೆ ಎಂದರು.
ಕಾಂಗ್ರೆಸ್ ಆಡಳಿತ ಡ್ರಗ್ ಮಾಫಿಯಾದಡಿ ಬದುಕಿತ್ತು. ಡ್ರಗ್ ಮಾಫಿಯಾವನ್ನು ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರ ನಿಯಂತ್ರಿಸಿದೆ. ಬೊಮ್ಮಾಯಿಯವರ ನೇತೃತ್ವದಲ್ಲಿ ಸರ್ಕಾರ ಮತ್ತು ಪಕ್ಷ ಸದೃಢವಾಗಿದೆ ಎಂದು ಹೇಳಿದರು.