ದೇಶದಲ್ಲಿ ಬಿಜೆಪಿಯನ್ನು ಬೆಳೆಸಿದ್ದು ಕಾಂಗ್ರೇಸ್ , ಬಿಜೆಪಿ ಯ ತವರು ಮನೆಯೇ ಕಾಂಗ್ರೆಸ್ : ಅಬ್ದುಲ್ ಮಜೀದ್

Prasthutha|

► ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಎಪ್ಪತ್ತೈದು ವರ್ಷವಾದರೂ ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಜನತೆಗೆ ಏನು ಕೊಟ್ಟಿದೆ ?

- Advertisement -

ಕಾಪು: ದೇಶದಲ್ಲಿ ಬಿಜೆಪಿಯನ್ನು ಬೆಳೆಸಿದ್ದೇ ಕಾಂಗ್ರೇಸ್ , ಬಿಜೆಪಿಯ ತವರು ಮನೆಯೇ ಕಾಂಗ್ರೆಸ್ ಎಂದು SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ವಾಗ್ದಾಳಿ ನಡೆಸಿದ್ದಾರೆ. ಕಾಪು ಪುರಸಭಾ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ನರೇಂದ್ರ ಮೋದಿ ಸರಕಾರದ ಆಡಳಿತಾವಧಿಯಲ್ಲಿ ನಿರುದ್ಯೋಗ, ಸಣ್ಣ ಸಣ್ಣ ಉದ್ದಿಮೆದಾರರ ಆತ್ಮಹತ್ಯೆ, ಶ್ರೀಮಂತರ ಪಲಾಯನ, ಬ್ಯಾಂಕುಗಳ ದಿವಾಳಿ, ರೈತರ ಸಾವುಗಳು, ವಿದ್ಯಾರ್ಥಿಗಳ ಭವಿಷ್ಯದ ಆತಂಕ, ನೌಕರರು, ಕೂಲಿ ಕಾರ್ಮಿಕರು, ಹೀಗೆ ದೇಶದ ಸಮಸ್ತ ನಾಗರೀಕರ ಭವಿಷ್ಯ ಅತಂತ್ರದ ಭಯದಲ್ಲಿ ಕಮರಿ ಹೋಗುತ್ತಿದೆ. ದೇಶದಲ್ಲಿ ಭ್ರಷ್ಟಾಚಾರ ರಾರಾಜಿಸುತ್ತಿದ್ದು, ವರದಕ್ಷಿಣೆ ಸಾವುಗಳು ನಿರಂತರವಾಗಿವೆ, ಅಲ್ಪಸಂಖ್ಯಾತರು‌ ಹಾಗು ದಲಿತರ ಮೇಲೆ ದೌರ್ಜನ್ಯಗಳು ಅವ್ಯಾಹತವಾಗುತ್ತಿವೆ ಎಂದರು.

ದೇಶದಲ್ಲಿ ಪ್ರತಿನಿತ್ಯ ಹತ್ತು ಕೊಲೆಗಳು, ನೂರು ಅತ್ಯಾಚಾರಗಳು, ನೂರಾರು ಹಲ್ಲೆಗಳು, ಸಾವಿರಾರು ಬೆದರಿಕೆ ಮತ್ತು ಆಸ್ತಿ ಕಬಳಿಕೆಯ ಕ್ರೌರ್ಯಗಳು ನಡೆಯುತ್ತಲೇ ಇವೆ. ಮತ್ತು ಇವೆಲ್ಲಾ ಕೇವಲ ಜಾತಿ ಮತ್ತು ಧರ್ಮದ ಕಾರಣದಿಂದಾಗಿ ಆಗುತ್ತಿವೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶೈಕ್ಷಣಿಕ ಕ್ರಾಂತಿ ಎಂಬುದು ಮರೀಚಿಕೆಯಾಗಿದೆ. ಡಿಸೆಂಬರ್ 6 ಬಾಬಾ ಸಾಹೇಬರು ನಮ್ಮನ್ನಗಲಿದ ದಿನ. ಆದರೇ ಅದೇ ದಿನ ಇಡೀ ದೇಶ ಕರಾಳ ದಿನವನ್ನಾಗಿ ಆಚರಿಸುತ್ತಿದೆ. ಇದಕ್ಕೆ ಕಾರಣ ಬಾಬರಿ ಮಸೀದಿ ಕೆಡವಿದ ಸಂಘಪರಿವಾರದ ಗೂಂಡಾಗಳ ದೌರ್ಜನ್ಯ ಒಂದು ಕಡೆಯಾದರೆ, ಅದಕ್ಕೆ ಕುಮ್ಮಕ್ಕು ನೀಡಿದ ಕಾಂಗ್ರೆಸ್ ಮತ್ತೊಂದು ಕಡೆ‌. ಒಟ್ಟಾರೆ ಒಂದೇ ದೇಹದ ಎರಡು ತಲೆ ಹಾವಾದ ಬಿಜೆಪಿ ಮತ್ತು ಕಾಂಗ್ರೆಸ್ ಈ ದೇಶದಲ್ಲಿ ಮಾಡಿರುವ ಮತ್ತು ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ ಎಂದು ಟೀಕಿಸಿದರು.

- Advertisement -

ದೇಶದಾದ್ಯಂತ ಪ್ರತೀ ನಿತ್ಯ, ಪ್ರತೀ ಕ್ಷಣ ನಡೆಯುತ್ತಿರುವ ದಲಿತ, ದಮನಿತ ಹಾಗು ಧಾರ್ಮಿಕ ಅಲ್ಪ ಸಂಖ್ಯಾತರ ಮೇಲಿನ ದಬ್ಬಾಳಿಕೆ, ದೌರ್ಜನ್ಯಗಳು. ಆಹಾರ ಸಂಸ್ಕೃತಿಯ ಮೇಲಿನ ದಾಳಿಗಳು, ಮುಸ್ಲಿಂ ಧಾರ್ಮಿಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಷಡ್ಯಂತ್ರಗಳು‌, ಹೀಗೆ, ಅಲ್ಪಸಂಖ್ಯಾತರು ಹಾಗು ಕ್ರಿಶ್ಚಿಯನ್ನರ ವಿರುದ್ದ ಚಾಲ್ತಿಯಲ್ಲಿರುವ ಯಾವುದೇ ದೌರ್ಜನ್ಯಗಳ ವಿರುದ್ಧ ದಲಿತರ ಪಕ್ಷ ಎಂದು ಹೇಳಿಕೊಳ್ಳುವ ಕಾಂಗ್ರೆಸ್! ಉಸಿರು ಬಿಡುತ್ತಿಲ್ಲ. ಈಗ ನಡೆಯುತ್ತಿರುವ ಲೋಕಸಭೆಯಲ್ಲಾಗಲಿ ಅಥವಾ ವಿಧಾನಸಭೆಯಲ್ಲಾಗಲಿ ಒಂದೇ ಒಂದು ಧ್ವನಿಯನ್ನೂ ಎತ್ತಿಲ್ಲ. ಹೆಣ್ಣು ಮಕ್ಕಳು ತಮ್ಮ ಮೇಲೆ ನಡೆಯುವ ಅತ್ಯಾಚಾರಗಳನ್ನು ಎಂಜಾಯ್ ಮಾಡಿ! ಎನ್ನುವ ಮಾನಸಿಕ ರೋಗಿತನದ ಹೇಳಿಕೆಗಳನ್ನು ನೀಡುವುದು ಮತ್ತು ಅದನ್ನು ಕೇಳುತ್ತಾ ಸಂತೋಷ ಪಡುವ ಮನಸ್ಥಿತಿಯಲ್ಲಿ ಇವತ್ತು ಕಾಂಗ್ರೆಸ್ ಮತ್ತು ಬಿಜೆಪಿಗರು ಮೈಮರೆತು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ನಮ್ಮದು ಎಂದು ಎದೆ ಉಬ್ಬಿಸಿಕೊಳ್ಳುವ ಮುಸ್ಲಿಂ ಮತ್ತು ದಲಿತರು ಇದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಎಪ್ಪತ್ತು ವರ್ಷಗಳು ನಮ್ಮನ್ನಾಳಿದ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಸಾಧನೆ ಇಷ್ಟೇ ಹೊರತು ಮತ್ತೇನೂ ಇಲ್ಲ. ಭಾರತ ಎಂಬುದು ಇಂದು ಸರ್ವಾಧಿಕಾರಿ ಮೋದಿಯವರ ಆಡಳಿತಕ್ಕೆ ಒಳಪಟ್ಟಿರುವ ಪಾಪದ ಕೂಪವಾಗಿದೆ. ಈ ಪಾಪದ ಕೂಪದಿಂದ ನಾವು ಹೊರ ಬರಬೇಕಿದೆ. ಇದಕ್ಕೆ ಮೊದಲ ಹೆಜ್ಜೆಯಾಗಿ ತಮ್ಮೆಲ್ಲರ ಸಹಕಾರದ ಅಗತ್ಯವಿದೆ ಎಂದು ಹೇಳಿದರು.

ಕಾಪು ಪುರಸಭೆಯಲ್ಲಿ ಕಾಂಗ್ರೆಸ್ ಆಡಳಿತವು ಯಾವ ಅಭಿವೃದ್ಧಿಯನ್ನು ಮಾಡಲಿಲ್ಲ. ಐದು ವರ್ಷ ಪೂರ್ತಿಗೊಂಡರೂ ನಿಮ್ಮ ಪರವಾಗಿ ಏನೂ ಮಾಡಲು ಸಾಧ್ಯವಾಗಿಲ್ಲ. ನಂತರ ಬಂದ ಬಿಜೆಪಿಯು ತನ್ನ ಆಡಳಿತ ಅವಧಿಯಲ್ಲಿ ಕೇವಲ ನಿಷ್ಕ್ರಿಯವಾಗಿತ್ತು. ಶಾಸಕರೂ ಸಹಿತ ಯಾವುದೇ ಅನುದಾನವನ್ನು ನೀಡದೆ ಇಡೀ ಪುರಸಭೆಯನ್ನು ಅಭಿವೃದ್ಧಿ ರಹಿತ ಪುರಸಭೆಯನ್ನಾಗಿ ಮಾಡಿದ್ದರು.
ನಮ್ಮ ಎಸ್ ಡಿಪಿಐ ಪಕ್ಷದ ಕಾರ್ಯಕರ್ತರು ಅಧಿಕಾರವಿಲ್ಲದಿದ್ದರೂ ಜನರ ಬೇಡಿಕೆಗಳಿಗೆ ಸ್ಪಂದಿಸುತಿದ್ದಾರೆ. ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ಜನರ ಜೊತೆ ಬೆರೆತು ಕೆಲಸ ಮಾಡಿದ್ದಾರೆ. ಇದೇ ಕಾರಣ ಜನ ಇನ್ನೂ ನಮ್ಮನ್ನು ಮರೆತಿಲ್ಲ. SDPI ಪಕ್ಷದ ಅನಿವಾರ್ಯತೆ ಜನರಿಗೆ ಮನವರಿಕೆ ಆಗಿದೆಯಾದ್ದರಿಂದ ಕಾಪು ಪುರಸಭೆಯಲ್ಲಿ SDPI ಅಭ್ಯರ್ಥಿಗಳನ್ನು ಜನ ಬೆಂಬಲ ನೀಡಿ, ಅಧಿಕಾರಕ್ಕೆ ತರಲಿದ್ದಾರೆ ಎಂದು ಅಬ್ದುಲ್ ಮಜೀದ್ ಆಶಯ ವ್ಯಕ್ತಪಡಿಸಿದರು.

ರಾಜ್ಯ ಸಮಿತಿ ಸದಸ್ಯ ಅಥಾವುಲ್ಲಾ ಜೋಕಟ್ಟೆ , ಜಿಲ್ಲಾ ಅಧ್ಯಕ್ಷ ನಝೀರ್ ಅಹ್ಮದ್, ಜಿಲ್ಲಾ ನಿಕಟ ಪೂರ್ವ ಅಧ್ಯಕ್ಷ ಇಲ್ಯಾಸ್ ಸಾಸ್ತಾನ, ಕಾರ್ಯದರ್ಶಿ ಮಜೀದ್, ಅಬ್ದುಲ್ ವಾಹಿದ್,ಅಸೆಂಬ್ಲಿ ಅಧ್ಯಕ್ಷ ಹನೀಫ್ ಮೂಳೂರು, ಸಾಧಿಕ್ ಕೆಪಿ ಉಪಸ್ಥಿತರಿದ್ದರು.

Join Whatsapp