ದೇಶದಲ್ಲಿಯೂ ಪ್ರತಿದಿನ 14ಲಕ್ಷ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಬಹುದು : ಕೇಂದ್ರದ ಎಚ್ಚರಿಕೆ !
Prasthutha: December 18, 2021

ನವದೆಹಲಿ: ಭಾರತದಲ್ಲಿಯೂ ಪ್ರತಿದಿನ 14 ಲಕ್ಷ ಒಮಿಕ್ರಾನ್ ರೂಪಾಂತರ ಪ್ರಕರಣಗಳು ಪತ್ತೆಯಾಗಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಯುಕೆಯಂತಹ ಪರಿಸ್ಥಿತಿ ಭಾರತದಲ್ಲಿ ಎದುರಾದರೆ ಓಮಿಕ್ರಾನ್ ಆತಂಕ ಸೃಷ್ಟಿಸಬಹುದು ಎಂದು ಹೇಳಿದೆ. ಇದೀಗ ಒಮಿಕ್ರಾನ್ ರೂಪಾಂತರದ ಪ್ರಸರಣ ವಿಶ್ವದೆಲ್ಲೆಡೆ ಶುರುವಾಗಿದೆ. ಯುಕೆ ಮತ್ತು ಫ್ರಾನ್ಸ್ನಲ್ಲಿ ಕೊವಿಡ್ 19 ಪ್ರಕರಣಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಭಾರತದಲ್ಲೂ ಇದೇ ರೀತಿ ಪ್ರಸರಣವಾದರೆ ದಿನಕ್ಕೆ 14 ಲಕ್ಷದಷ್ಟು ಕೇಸ್ ಗಳು ದಾಖಲಾಗುತ್ತವೆ ಎಂದು ಹೇಳಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನೀತಿ ಆಯೋಗದ ಸದಸ್ಯ ಡಾ. ವಿ.ಕೆ.ಪೌಲ್, ಆಫ್ರಿಕಾದ ಕೆಲವು ದೇಶಗಳಲ್ಲಿ ಮತ್ತು ಯುರೋಪ್ನ ಕೆಲ ದೇಶಗಳಲ್ಲಿ ಇದೀಗ ಕೊವಿಡ್ 19 ಪರಿಸ್ಥಿತಿ ಹದಗೆಟ್ಟಿದೆ . ಕೊರೊನಾ ವೈರಸ್ ಮತ್ತು ಅದರ ಎಲ್ಲ ರೂಪಾಂತರಗಳ ಪ್ರಸರಣವೂ ಆಗುತ್ತಿದೆ. ಅದರಲ್ಲೂ ಒಮಿಕ್ರಾನ್ ಅತ್ಯಂತ ವೇಗವಾಗಿ ಹರಡುತ್ತಿದೆ. ಅಲ್ಲಿ ಉಂಟಾಗುತ್ತಿರುವ ಕೆಟ್ಟ ಪರಿಸ್ಥಿತಿ ಭಾರತಕ್ಕೆ ಬರುವುದು ಬೇಡ, ಅದಕ್ಕಾಗಿ ಎಲ್ಲ ರೀತಿಯ ಪ್ರಯತ್ನಗಳನ್ನೂ ನಾವು ಮಾಡುತ್ತಿದ್ದೇವೆ. ಆದರೂ ಭಾರತದಲ್ಲೂ ಒಮಿಕ್ರಾನ್ ಪ್ರಸರಣ ಅತ್ಯಂತ ಹೆಚ್ಚಾಗಬಹುದು. ಎದುರಿಸಲು ನಾವು ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.
ಯುಕೆಯಲ್ಲಿ ಗುರುವಾರ ಒಂದೇ ದಿನ 80,000 ಕೊರೊನಾ ಕೇಸ್ಗಳು ದಾಖಲಾಗಿವೆ. ಆದರೆ ಅಲ್ಲಿ ಲಸಿಕೆ ನೀಡಿಕೆಯೂ ವೇಗದಿಂದ ಸಾಗುತ್ತಿದೆ. ಇದೇ ಪರಿಸ್ಥಿತಿ ಭಾರತದಲ್ಲಿ ಎದುರಾದರೆ ಕಷ್ಟಕರವಾಗಬಹುದು ನಮ್ಮಲ್ಲಿ ಜನಸಂಖ್ಯೆ ಅತ್ಯಂತ ಹೆಚ್ಚಾಗಿರುವುದರಿಂದ ಲಸಿಕೆಯು ವೇಗ ಪಡೆದುಕೊಳ್ಳುವುದಿಲ್ಲ .ಇನ್ನು ಫ್ರಾನ್ಸ್ನಲ್ಲಿ ಶೇ.80ರಷ್ಟು ಭಾಗಶಃ ಲಸಿಕೆ ನೀಡಿ ಮುಗಿದಿದೆ. ಆದರೆ ದಿನಕ್ಕೆ 65 ಸಾವಿರ ಕೇಸ್ಗಳು ದಾಖಲಾಗುತ್ತಿವೆ ಎಂದು ಹೇಳಿದ್ದಾರೆ.
