ಬೆಂಗಳೂರು: ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆ ಹೆಸರಿನಲ್ಲಿ ಪಕ್ಷದ ಅಧಿನಾಯಕಿ ಸೋನಿಯಾಗಾಂಧಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿ ರಾಜಭವನ ಚಲೋ ಕೈಗೊಂಡರು.
ನಗರದ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ ನಗರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ಸಾವಿರಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಸಮಾವೇಶಗೊಂಡು ಅಲ್ಲಿಂದ ರಾಜಭವನದತ್ತ ಚಲೋ ಹೊರಟರು.
ಮಾರ್ಗ ಮಧ್ಯದ ನೃಪತುಂಗ ರಸ್ತೆಯಿಂದ ಅರಮನೆ ರಸ್ತೆ ತಿರುವಿನಲ್ಲೇ ಭದ್ರತೆಗಿದ್ದ ಸಾವಿರಾರು ಪೊಲೀಸರು ಜಾಥಾವನ್ನು ತಡೆದಿದ್ದು ಈ ವೇಳೆ ಪೊಲೀಸರು ಹಾಗೂ ಕಾಂಗ್ರೆಸ್ ನಾಯಕರ ನಡುವೆ ಮಾತಿನ ಚಕಮಕಿ ನಡೆಯಿತು.
ಅಲ್ಲಿಯೇ ಕುಳಿತ ಪಾದಯಾತ್ರೆ ಹೊರಟ ಸಾವಿರಾರು ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಬಿಜೆಪಿ ಮತ್ತು ಪ್ರಧಾನಿ ನರೇದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿದ ನಾಯಕರು, ಕಾರ್ಯಕರ್ತರು ರಾಜಭವನದತ್ತ ಮುನ್ನುಗ್ಗಲು ಯತ್ನಿಸಿದರು. ಅವರನ್ನು ಬ್ಯಾರಿಕೇಡ್ ಹಾಕಿ, ವಾಹನಗಳನ್ನು ಅಡ್ಡ ನಿಲ್ಲಿಸುವ ಮೂಲಕ ತಡೆಯಲಾಯಿತು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕರಾದ ಸಿದ್ದರಾಮಯ್ಯ, ಬಿ.ಕೆ.ಹರಿಪ್ರಸಾದ್, ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲಿಂ ಅಹ್ಮದ್, ಮಾಜಿ ಸಚಿವರಾದ ಎಂ.ಪಿ.ಪಾಟೀಲ್, ಪರಮೇಶ್ವರ್ ನಾಯಕ್ , ರಮಾನಾಥ್ ರೈ, ದಿನೇಶ್ ಗುಂಡೂರಾವ್, ರಮೇಶ್ ಕುಮಾರ್ ಸೇರಿ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.
ಫ್ರೀಡಂ ಪಾರ್ಕ್ ನಿಂದ ರಾಜಭವನ ಚಲೋ ಹೊರಡುವ ಮುನ್ನ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ ಬಿಜೆಪಿ ಸರ್ಕಾರಗಳು ಎಲ್ಲಾ ರಂಗಗಳಲ್ಲೂ ವಿಫಲವಾಗಿವೆ. ತಮ್ಮ ವೈಪಲ್ಯವನ್ನು ಮುಚ್ಚಿಟ್ಟುಕೊಳ್ಳಲು ಪ್ರತಿಪಕ್ಷಗಳ ಮೇಲೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡುತ್ತಾ ಪ್ರಶ್ನೆ ಕೇಳುವ ಧ್ವನಿಯನ್ನು ಅಡಗಿಸಬಹುದು ಎಂದು ಭಾವಿಸಿವೆ. ಅದು ಎಂದಿಗೂ ಸಾಧ್ಯವಿಲ್ಲ ಕಿಡಿಕಾರಿದರು.
ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ತಮ್ಮ ಪ್ರಭಾವದಿಂದ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ಗಾಂಧಿ ಕುಟುಂಬ ಎಂದರೆ ಭಯ, ಅದಕ್ಕಾಗಿ ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಂಡು ವಿಚಾರಣೆ ನಡೆಸುತ್ತಿದೆ. ರಾಹುಲ್ ಗಾಂಧಿ ಅವರ ವಿಚಾರಣೆಯಿಂದ ಏನನ್ನು ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಈಗ ಸೋನಿಯಾ ಗಾಂಧಿ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ತರಾಟೆಗೆ ತೆಗೆದುಕೊಂಡರು.
ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಗಿದು ಹೋದ ಅಧ್ಯಾಯ ಎಂದು ಈ ಮೊದಲು ಹಣಕಾಸು ಸಚಿವರಾಗಿದ್ದ ಅರುಣ್ ಜೈಟ್ಲಿ ಸಂಸತ್ ನಲ್ಲಿ ಹೇಳಿಕೆ ನೀಡಿದ್ದರು. ಕೇಂದ್ರ ಸರ್ಕಾರ ರಾಜಕೀಯ ದ್ವೇಷಕ್ಕಾಗಿ ಹೊಸದಾಗಿ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುತ್ತಿದೆ. ವಿಚಾರಣೆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳೇನು ಎಂಬುದನ್ನು ವಿಡಿಯೋ ಮಾಡಿ ಬಹಿರಂಗ ಪಡಿಸಿ ಎಂದು ಸವಾಲು ಹಾಕಿದರು.
ಬಿಜೆಪಿ ಸರ್ಕಾರದ ಬೆದರಿಕೆಗಳಿಗೆ ಹೆದರದೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯುದ್ಧಕ್ಕೂ ಜೊತೆ ನಡೆಯಬೇಕು. ಅವರು ನಮ್ಮನ್ನು ಬಂಧಿಸಿದರೂ ಹಿಂದೇಟು ಹಾಕುವುದು ಬೇಡ ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದರು.
ಇಡಿ ತನಿಖೆಯ ನೆಪದಲ್ಲಿ ಗಾಂಧಿ ಕುಟುಂಬದ ರಾಜಕೀಯ ವರ್ಚಸ್ಸನ್ನು ತಗ್ಗಿಸುವ ದುರುದ್ದೇಶವಿದು ಎಂದು ವಿಚಾರಣೆಯನ್ನು ಖಂಡಿಸಿದರು
ಕಾಂಗ್ರೆಸ್ ಪ್ರತಿಭಟನೆ ಹಿನ್ನೆಲೆಯಲ್ಲಿ ಫ್ರೀಡಂ ಪಾರ್ಕ್ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಅವರ ನೇತೃತ್ವದಲ್ಲಿ ಐವರು ಎಸಿಪಿ, 15 ಇನ್ಸ್ ಪೆಕ್ಟರ್, 30 ಪಿಎಸ್ ಐ, 600 ಮಂದಿ ಪೊಲೀಸ್ ಸಿಬ್ಬಂದಿಗಳು ಭದ್ರತೆ ಕೈಗೊಂಡಿದ್ದರು.
ಹೆಚ್ಚುವರಿಯಾಗಿ 5 ಕೆಎಸ್ ಆರ್ ಪಿ ತುಕಡಿಗಳನ್ನು ನಿಯೋಜಿಸಲಾಗಿದ್ದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಬೆಳಗ್ಗೆ 9 ಗಂಟೆಯಿಂದಲೇ ವಾಹನ ಸಂಚಾರ ಮಾರ್ಗಗಳಲ್ಲಿ ಬದಲಾವಣೆ ಮಾಡಲಾಗಿತ್ತು. ಮೆಜೆಸ್ಟಿಕ್ನಿಂದ ಬರುವ ವಾಹನಗಳು ಮೌರ್ಯ ಸರ್ಕಲ್, ಹಳೇ ಜೆಡಿಎಸ್ ಕಚೇರಿ, ರೇಸ್ ಕೋರ್ಸ್ ರಸ್ತೆ, ಸಿಐಡಿ ಜಂಕ್ಷನ್, ಮಹಾರಾಣಿ ಜಂಕ್ಷನ್, ಕೆ.ಆರ್ ಸರ್ಕಲ್ ಮೂಲಕ ಹೋಗುವಂತೆ ಸಂಚಾರ ಪೊಲೀಸರು ಕ್ರಮ ಕೈಗೊಂಡಿದ್ದರು.