ಈಶ್ವರಪ್ಪಗೆ ಕ್ಲೀನ್ ಚಿಟ್: ಅಕ್ರಮ ಎಸಗುವವರ ಪರವಾಗಿದ್ದೇವೆ ಎಂಬ ಕೆಟ್ಟ ಸಂದೇಶ ನೀಡಿದ ಬಿಜೆಪಿ- ಎಎಪಿ ಕಿಡಿ

Prasthutha|

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಸಂಬಂಧಿಸಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಕ್ಲೀನ್ ಚಿಟ್ ನೀಡಿರುವ ಪೊಲೀಸರ ನಡೆಯನ್ನು ಆಮ್ ಆದ್ಮಿ ಪಾರ್ಟಿ ಖಂಡಿಸಿದೆ.

- Advertisement -

ಎಎಪಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪಕ್ಷದ ರಾಜ್ಯ ಕಾರ್ಯದರ್ಶಿ ಬಿ.ಟಿ.ನಾಗಣ್ಣ, “ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪನವರು ಪ್ರಮುಖ ಆರೋಪಿಯಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಂತೋಷ್ ರವರು ಈಶ್ವರಪ್ಪ ವಿರುದ್ಧ ವಾಟ್ಸಪ್ ನಲ್ಲಿ ಡೆತ್ ನೋಟ್ ಕಳುಹಿಸಿರುವುದನ್ನು ಪೊಲೀಸರೇ ದೃಢಪಡಿಸಿದ್ದಾರೆ. ಆದರೂ ಕೂಡ ಈಶ್ವರಪ್ಪನವರ ವಿಚಾರಣೆಯನ್ನೂ ನಡೆಸದೇ ಕ್ಲೀನ್ ಚಿಟ್ ನೀಡಿರುವುದು ಖಂಡನೀಯ. ಅಕ್ರಮ ಎಸಗುವವರ ಪರವಾಗಿದ್ದೇವೆ ಎಂಬ ಕೆಟ್ಟ ಸಂದೇಶವನ್ನು ರಾಜ್ಯ ಬಿಜೆಪಿ ಸರ್ಕಾರ ಈ ಮೂಲಕ ರವಾನಿಸಿದೆ” ಎಂದು ಹೇಳಿದರು.

“ರಾಜ್ಯದ ಭ್ರಷ್ಟ ಬಿಜೆಪಿ ಸರ್ಕಾರವು ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರಿ, ಪ್ರಮುಖ ಆರೋಪಿ ಈಶ್ವರಪ್ಪನವರನ್ನು ರಕ್ಷಿಸಿರುವುದು ಸ್ಪಷ್ಟವಾಗಿ ತಿಳಿಯುತ್ತಿದೆ. ಘಟನೆ ನಡೆದಾಗಲೇ ಈಶ್ವರಪ್ಪನವರ ಬೆನ್ನಿಗೆ ನಿಂತಿದ್ದ ಬಿಜೆಪಿ ಸರ್ಕಾರವು, ತನಿಖೆಗೂ ಮುನ್ನವೇ ಈಶ್ವರಪ್ಪನವರನ್ನು ನಿರಪರಾಧಿ ಎಂದು ಘೋಷಿಸಿತ್ತು. ನಂತರ ಆಮ್ ಆದ್ಮಿ ಪಾರ್ಟಿಯು ಸಿಎಂ ಮನೆಗೆ ಮುತ್ತಿಗೆ ಹಾಕಲು ಮುಂದಾದಾಗ ಈಶ್ವರಪ್ಪನವರ ರಾಜೀನಾಮೆ ಪಡೆದಿತ್ತು. ಆದರೆ ಕೇವಲ ಕಾಟಾಚಾರಕ್ಕೆ ತನಿಖೆ ನಡೆಸಿ ಸಂತೋಷ್ ಪಾಟೀಲ್ರವರ ಕುಟುಂಬಕ್ಕೆ ಅನ್ಯಾಯವೆಸಗಿದೆ” ಎಂದು ಬಿ.ಟಿ.ನಾಗಣ್ಣ ಹೇಳಿದರು.

- Advertisement -

“ರಾಜಕೀಯ ಒತ್ತಡಕ್ಕೆ ಮಣಿದ ಉಡುಪಿ ಪೊಲೀಸರು ಈಶ್ವರಪ್ಪನವರ ವಿಚಾರಣೆ ನಡೆಸದೇ ಕೇವಲ ಮೂರು ತಿಂಗಳಲ್ಲಿ ವರದಿ ಸಿದ್ಧಪಡಿಸಿದ್ದಾರೆ. ರಾಜ್ಯ ಪೊಲೀಸ್ ಇಲಾಖೆಯು ಈ ದೋಷಪೂರಿತ ವರದಿಯನ್ನು ಹಿಂಪಡೆದು, ಈಶ್ವರಪ್ಪನವರ ವಿಚಾರಣೆ ನಡೆಸಬೇಕು. ಡೆತ್ ನೋಟ್ ಆಧಾರವಾಗಿಟ್ಟುಕೊಂಡು ಈಶ್ವರಪ್ಪನವರನ್ನು ಬಂಧಿಸಿ, ಯಾವುದೇ ಒತ್ತಡಕ್ಕೆ ಮಣಿಯದೇ ವಿಚಾರಣೆ ನಡೆಸಬೇಕು. ಪೊಲೀಸ್ ತನಿಖೆಯ ಬದಲು ನ್ಯಾಯಾಂಗ ತನಿಖೆಗೆ ವಹಿಸಬೇಕು. ಈಶ್ವರಪ್ಪನವರು ಸಂತೋಷ್ ಪಾಟೀಲ್‌ರವರಿಗೆ ನೀಡಿದ ಕಿರುಕುಳ ಹಾಗೂ ವಂಚನೆಯು ರಾಜ್ಯದ ಜನತೆಗೆ ತಿಳಿಯಬೇಕು” ಎಂದು ಬಿ.ಟಿ.ನಾಗಣ್ಣ ಆಗ್ರಹಿಸಿದರು.

ಈಶ್ವರಪ್ಪನವರ ನೇತೃತ್ವದಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವಾಗಿದ್ದು, ಈ ಬಗ್ಗೆ ಆಮ್ ಆದ್ಮಿ ಪಾರ್ಟಿ ಹೋರಾಟ ಮಾಡಿದ್ದರೂ ಯಾವುದೇ ಸೂಕ್ತ ತನಿಖೆ ನಡೆದಿಲ್ಲ. ಕೆ.ಜೆ.ಜಾರ್ಜ್ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆದಿದ್ದರೂ ಟೀಕಿಸುತ್ತಿದ್ದ ಬಿಜೆಪಿಯು ಈಗ ಈಶ್ವರಪ್ಪನವರ ವಿರುದ್ಧ ಪೊಲೀಸ್ ತನಿಖೆಯನ್ನೂ ಸರಿಯಾಗಿ ನಡೆಸದಿರುವುದು ದುರಂತ. ಆರ್ ಡಿಪಿಆರ್ ಹಗರಣಗಳು ಹಾಗೂ ಸಂತೋಷ್ ಪ್ರಕರಣದ ಕುರಿತು ಸೂಕ್ತ ನ್ಯಾಯಾಂಗ ತನಿಖೆ ನಡೆಸದಿದ್ದರೆ ರಾಜ್ಯ ಸರ್ಕಾರದ ವಿರುದ್ಧ ಆಮ್ ಆದ್ಮಿ ಪಾರ್ಟಿಯು  ತೀವ್ರ ರೀತಿಯ ಹೋರಾಟ ಮಾಡಲಿದೆ” ಎಂದು ಬಿ.ಟಿ.ನಾಗಣ್ಣ ಎಚ್ಚರಿಕೆ ನೀಡಿದರು.

Join Whatsapp