ಭ್ರಷ್ಟಾಚಾರವನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್ ಪಕ್ಷ: ಬೊಮ್ಮಾಯಿ

Prasthutha|

 ಬೆಂಗಳೂರು: ಭ್ರಷ್ಟಾಚಾರವನ್ನು ಹುಟ್ಟಿಹಾಕಿದ್ದೇ ಕಾಂಗ್ರೆಸ್ ಪಕ್ಷ. ಲೋಕಾಯುಕ್ತವನ್ನು ಮುಚ್ಚಿ ಎಸಿಬಿಯನ್ನು ಪ್ರಾರಂಭಿಸಿದರು. 50 ಕ್ಕಿಂತ ಹೆಚ್ಚು ಪ್ರಕರಣಗಳು ಕಾಂಗ್ರೆಸ್ ನವರ ಮೇಲಿತ್ತು. ಅವುಗಳನ್ನು ಮುಚ್ಚಿಹಾಕಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

- Advertisement -

ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಬಿಜೆಪಿ ವತಿಯಿಂದ ಇಂದು ಏರ್ಪಡಿಸಿದ್ದ ಜನ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು’ ತಾವೇ ಶುದ್ಧಹಸ್ತರು ಎನ್ನುವಂತೆ ಮಾತನಾಡುವ ಕಾಂಗ್ರೆಸ್ ಪಕ್ಷ ಇಡೀ ದೇಶದಲ್ಲಿ ಭ್ರಷ್ಟಾಚಾರ ಮಾಡಿದೆ. ಸಾಮಾಜಿಕ ನ್ಯಾಯವೆಂದು ಮಾತನಾಡುವ ಕಾಂಗ್ರೆಸ್, ಸಾಮಾಜಿಕ ಅನ್ಯಾಯವನ್ನೇ ಮಾಡಿದೆ. ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಕಳೆದುಕೊಂಡಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಭಾಜಪ ಪರ ಫಲಿತಾಂಶ ಕರ್ನಾಟಕ ರಾಜ್ಯದ ಭಾಜಪ ಗೆಲುವಿಗೆ ಮುನ್ನುಡಿ ಬರೆಯಲಿದೆ ಎಂದರು.

ಕಾಂಗ್ರೆಸ್ ಪಕ್ಷ 50 ವರ್ಷಕ್ಕಿಂತ ಹೆಚ್ಚು ಕರ್ನಾಟಕವನ್ನು ಆಳಿದ್ದಾರೆ. ವಾಣಿವಿಲಾಸ ಸಾಗರದ ಕಾಯಕಲ್ಪ ಮಾಡಬೇಕೆನ್ನುವ ಇಚ್ಛಾಶಕ್ತಿ ಅವರಿಗಿರಲಿಲ್ಲ. ಇಲ್ಲಿನ ಜನ ಮತ ಹಾಕಿ ಗೆಲ್ಲಿಸಿದ ಕಾಂಗ್ರೆಸ್ ಪಕ್ಷ, ಜನರಿಗೆ ನೀರು ಪೂರೈಸುವ ಮೂಲಕ ಜನರ ಋಣವನ್ನು ತೀರಿಸುವ ಕೆಲಸ ಮಾಡಲಿಲ್ಲ. ಆದರೆ ಈ ಕೆಲಸವನ್ನು ಭಾಜಪ ಸರ್ಕಾರ ಮಾಡಿದೆ ಎಂದರು.

- Advertisement -

ಕಾಂಗ್ರೆಸ್ ನವರು  ಮತ್ತೆ ಅಧಿಕಾರಕ್ಕೆ ಬರಬೇಕೆಂದು ಹಂಬಲಿಸುತ್ತಾರೆ. ಅವರ ಅಧಿಕಾರದ ಐದು ವರ್ಷಗಳಲ್ಲಿ ಅನ್ನಭಾಗ್ಯದಲ್ಲಿ ಕನ್ನ ಹೊಡೆದರು. ಎಸ್ ಸಿ ಎಸ್ ಟಿ ಗಳಿಗೆ ನೀಡುವ ದಿಂಬು ಹಾಸಿಗೆಗಳಿಗೂ ಕನ್ನ, ಸಣ್ಣ ನೀರಾವರಿ, ಜಲಸಂಪನ್ಮೂಲ, ವಿದ್ಯುಚ್ಛಕ್ತಿಯಲ್ಲಿ ಭ್ರಷ್ಟಾಚಾರ ಮಾಡಿದರು.  ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗದ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವರಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಶಾಸಕರಾದ ಪೂರ್ಣಿಮಾ ಶ್ರೀನಿವಾಸ, ಎಂ. ಚಂದ್ರಪ್ಪ, ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ರವಿಕುಮಾರ್ ಮತ್ತಿತರರು ಹಾಜರಿದ್ದರು.



Join Whatsapp