ಪ್ರಮಾಣ ವಚನ ಮುಂದೂಡಿದ ಸ್ಪೀಕರ್ ನಡೆಗೆ ಕೈ ನಾಯಕರ ಅಸಮಾಧಾನ

Prasthutha|

ಬೆಂಗಳೂರು: ನೂತನವಾಗಿ ಆಯ್ಕೆಯಾದ ಹಾನಗಲ್ ಶಾಸಕ ಶ್ರೀನಿವಾಸ್ ಮಾನೆ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ, ಶಾಸಕ ಡಿ.ಕೆ. ಶಿವಕುಮಾರ್ ಅವರನ್ನು ಕಾಯಲು ನಿರಾಕರಿಸಿದ ಸ್ಪೀಕರ್ ವಿಶ್ವೇಶ್ವರ ಹೆಗ್ಡೆ ಕಾಗೇರಿ ಕಾರ್ಯಕ್ರಮವನ್ನು ಮುಂದೂಡಿದರು.

- Advertisement -

ಶ್ರೀನಿವಾಸ್ ಮಾನೆ ವಿಧಾನಸೌಧದಲ್ಲಿ ಪ್ರಮಾಣ ವಚನ ಸ್ವೀಕರಿಸಲು ಸಿದ್ಧವಾಗಿದ್ದರು. ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ನಾನು ಪ್ರಮಾಚವಚನ ಸ್ವೀಕರಿಸಬೇಕೆಂಬುದು ಕಾರ್ಯಕರ್ತರ ಅಭಿಲಾಷೆಯಾಗಿತ್ತು. ಮಳೆ ಮತ್ತು ಟ್ರಾಫಿಕ್ ಸಮಸ್ಯೆಯಿಂದಾಗಿ ಡಿ.ಕೆ.ಶಿವಕುಮಾರ್ ಅವರು ಬರಲು ತಡವಾಗಿದ್ದರಿಂದ ಅವರನ್ನು ಕಾಯಲು ಸ್ಪೀಕರ್ ನಿರಾಕರಿಸಿದರು. ಬಳಿಕ ಸ್ಪೀಕರ್ ಕೊಠಡಿಯಿಂದ ನಿರ್ಗಮಿಸಿದರು ಎಂದು ಮಾನೆ ವಿಷಾದಿಸಿದರು.

ಪ್ರಮಾಣವಚನಕ್ಕೆ ಮತ್ತೊಂದು ದಿನಾಂಕವನ್ನು ನಿಗದಿಪಡಿಸಲಾಗುವುದೆಂದು ಸ್ಪೀಕರ್ ತಿಳಿಸಿದ್ದಾರೆ.

- Advertisement -

ಸಂಚಾರ ದಟ್ಟನೆಯಿಂದಾಗಿ ಐದು ನಿಮಿಷ ತಡವಾಯಿತು ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಸ್ಪೀಕರ್ ಅವರಿಗೆ ಸ್ವಲ್ಪ ಹೊತ್ತು ಕಾಯ ಬಹುದಿತ್ತು ಎಂದು ಹೇಳಿದರು.

ನಮಗೆ ಅವರ ಭಾವನೆಯೂ ಅರ್ಥವಾಗುತ್ತದೆ. ಹಾನಗಲ್ ಕ್ಷೇತ್ರದಲ್ಲಿನ ಸೋಲಿನ ಆಕ್ರೋಶವನ್ನು ಸ್ಪೀಕರ್ ಅವರು ಈ ರೀತಿ ವ್ಯಕ್ತಪಡಿಸುತ್ತಿದ್ದಾರೆ. ಅವರು ಯಾವಾಗ ಸಮಯ ನಿಗದಿ ಮಾಡುತ್ತಾರೋ ಮಾಡಲಿ. ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಇರಲಿ, ಇಲ್ಲಿ ರಾಜಕಾರಣ ಮಾತನಾಡುವುದು ಬೇಡ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಾಂಗ್ರೆಸ್ ನಾಯಕರ ಚಾರಿತ್ರ್ಯಹರಣಕ್ಕೆ ಬಿಜೆಪಿಯಿಂದ ಹುನ್ನಾರ

ಹಳೇ ಪ್ರಕರಣವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರ ಘನತೆ ಹಾಳು ಮಾಡುವ ಹುನ್ನಾರ ನಡೆಯುತ್ತಿದೆ. ಈ ರೀತಿ ಕಾಂಗ್ರೆಸ್ ನಾಯಕರ ಘನತೆಗೆ ಧಕ್ಕೆ ತರಲು ಸಾಧ್ಯವಿಲ್ಲ. ನಮ್ಮ ಬಳಿಯೂ ಕೆಲವು ಮಾಹಿತಿಗಳಿವೆ, ಸೂಕ್ತ ಸಮಯದಲ್ಲಿ ನಾವು ಮಾತನಾಡುತ್ತೇವೆ. ಇಡೀ ಬಿಟ್ ಕಾಯಿನ್ ಹಗರಣದ ಸಂಪೂರ್ಣ ಸತ್ಯಾಂಶ ಹೊರಬರಬೇಕಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಪ್ರಕರಣದ ವಿಚಾರಣೆಯನ್ನು ಇ.ಡಿ.ಗೆ ಹಸ್ತಾಂತರ ಮಾಡಲಾಗಿದೆ ಎಂಬುದು ಮುಖ್ಯಮಂತ್ರಿಗಳ ಹೇಳಿಕೆ. ಈಗ ಅವರು ಕೆಲವು ಕಾಂಗ್ರೆಸ್ ನಾಯಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಹಳೇ ಪ್ರಕರಣದವನ್ನು ಉಲ್ಲೇಖಿಸಿ ದಾರಿ ತಪ್ಪಿಸುತ್ತಿದ್ದಾರೆ. ಇದೇ ರೀತಿ ಹಲವು ವದಂತಿಗಳನ್ನು ಹರಿಯಬಿಡಲಾಗಿದೆ ಎಂದರು.

ಪ್ರಧಾನ ಮಂತ್ರಿಗಳಿಗೆ ಜನಸಾಮಾನ್ಯ ಬರೆದ ದೂರಿನ ಪತ್ರವನ್ನು ಓದಿದ್ದೇನೆ. ಅದರಲ್ಲಿ ಅನೇಕ ಬಿಜೆಪಿ ನಾಯಕರ ಹೆಸರುಗಳಿವೆ. ಅದು ನಿಜವೇ? ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಯೇ, ಇಲ್ಲವೇ? ಅವರ ಹೆಸರುಗಳನ್ನು ಬಹಿರಂಗ ಪಡಿಸಲಿ. ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಹೇಳುತ್ತಾರೆ. ಪೊಲೀಸ್ ಅಧಿಕಾರಿಗಳು ಈ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿರುವಾಗ, ಈ ವಿಚಾರವನ್ನು ಜನರ ಮುಂದೆ ಇಡುವುದು ಸರ್ಕಾರದ ಜವಾಬ್ದಾರಿ ಎಂದರು.

ಅವರು ತಮ್ಮ ನಾಯಕರ ಹೆಸರು ಮುಚ್ಚಿಟ್ಟು, ಕಾಂಗ್ರೆಸ್ ನಾಯಕರ ಹೆಸರು ತಳುಕು ಹಾಕಲು ಪ್ರಯತ್ನಿಸುತ್ತಿದ್ದಾರೆ. ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಅದೇ ರೀತಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲರ ಹೆಸರೂ ಹೊರಬರಬೇಕು. ಬಿಜೆಪಿ ನಾಯಕರು, ಮಂತ್ರಿಗಳೇ ಈ ವಿಚಾರವಾಗಿ ಮಾಧ್ಯಮಗಳು ಹಾಗೂ ಕಾಂಗ್ರೆಸ್ ನಾಯಕರಿಗೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಸಚಿವರು, ಅವರ ಮಕ್ಕಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತ, ಆಂತರಿಕ ಜಗಳ ಸಾಮಾನ್ಯ. ಹೀಗಾಗಿ ನಮಗೆ ಕೇಳಿ ಬಂದಿರುವ ಬಿಜೆಪಿ ನಾಯಕರ ಹೆಸರುಗಳ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ ತನಿಖೆ ಸರಿಯಾದ ಮಾರ್ಗದಲ್ಲಿ ನಡೆದು ನಮಗೆ ಸತ್ಯಾಂಶ ಹೊರಬರಬೇಕಿದೆ. ಆದರೆ ಬಿಜೆಪಿ ಈ ಪ್ರಕರಣದಲ್ಲಿ ತನ್ನ ನಾಯಕರನ್ನು ರಕ್ಷಿಸಿ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಹೊರಿಸುವ ರೀತಿಯಲ್ಲಿ ಪ್ರಕರಣದ ತನಿಖೆ ನಡೆಯುತ್ತಿದೆ.’

ರೈತರನ್ನು ಗೌರವದಿಂದ ನಡೆಸಿಕೊಳ್ಳಲಿ

ಬೆಳಗಾವಿ ರೈತರ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ‘ಬೆಳಗಾವಿಯಲ್ಲಿ ರೈತರ ಹೋರಾಟ ಅವರ ಹಕ್ಕು. ಆಸ್ತಿ, ಜಮೀನು ಕಳೆದುಕೊಳ್ಳುವುದರ ವಿರುದ್ಧ ಅವರು ಹೋರಾಟ ಮಾಡುತ್ತಿದ್ದಾರೆ. ಅವರಿಗೆ ಸೂಕ್ತ ಪರಿಹಾರ ನೀಡಿ, ಅವರ ಮನವೊಲಿಸಬೇಕು. ಗೌರವದಿಂದ ನಡೆಸಿಕೊಳ್ಳಬೇಕು. ಅದನ್ನು ಬಿಟ್ಟು ಸೀರೆ ಎಳೆಯುವುದು, ಆತ್ಮಹತ್ಯೆಗೆ ಪ್ರೇರೇಪಿಸುವುದು ಸರಿಯಲ್ಲ. ಈ ರೀತಿ ಪೊಲೀಸರ ದೌರ್ಜನ್ಯ ರಾಜ್ಯದಲ್ಲಿ ಹೆಚ್ಚಾಗುತ್ತಿದೆ. ಇದು ಖಂಡನೀಯ. ರೈತರನ್ನು ಗೌರವದಿಂದ ನಡೆಸಿಕೊಂಡು, ತಾಳ್ಮೆಯಿಂದ ಮಾತನಾಡಬೇಕು’ ಎಂದರು.


ಬಂಧಿಸಲು ತಡವೇಕೆ?

ಬಿಟ್ ಕಾಯಿನ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂಬ ವದಂತಿ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಾಂಗ್ರೆಸ್ ನಾಯಕರ ಮಕ್ಕಳು ಭಾಗಿಯಾಗಿದ್ದರೆ, ಅವರನ್ನು ಬಂಧಿಸಲು ತಡ ಮಾಡುತ್ತಿರುವುದೇಕೆ? ಕೂಡಲೇ ಬಂಧಿಸಲಿ. ಸಮಯ ವ್ಯರ್ಥ ಮಾಡುವುದೇಕೆ? ಅವರು ಯಾವ ರೀತಿ ಬಿಟ್ ಕಾಯಿನ್ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಿ. ಆರೋಪಿ ಸ್ನೇಹಿತನಾಗಿದ್ದ ಮಾತ್ರಕ್ಕೆ ಪ್ರಕರಣದಲ್ಲಿ ಸಿಲುಕಿಸಲು ಸಾಧ್ಯವಿಲ್ಲ. ಇದು ಬೆಂಗಳೂರು, ಕರ್ನಾಟಕ ರಾಜ್ಯದ ಘನತೆಯ ವಿಚಾರ. ಹೀಗಾಗಿ ಈ ಪ್ರಕರಣದ ಸತ್ಯಾಂಶ ಹೊರಬರಬೇಕಿದೆ’ ಎಂದರು.

ಈ ಪ್ರಕರಣದ ಹಾದಿ ತಪ್ಪಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ, ‘ಹಣ್ಣು ತಿಂದವರು ಯಾರೋ, ಸಿಪ್ಪೆ ತಿಂದವರು ಯಾರೋ, ಮೂತಿಗೆ ಒರೆಸಿದವರು ಯಾರೋ, ಎಲ್ಲವೂ ಮುಂದೆ ಗೊತ್ತಾಗುತ್ತದೆ’ ಎಂದು ಉತ್ತರಿಸಿದರು.

ಮುಖ್ಯಮಂತ್ರಿಗಳ ದೆಹಲಿ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿಗಳು ಯಾಕೆ ಹೋದರೊ, ಏನು ಗುಸುಗುಸು ನಡೆಯುತ್ತಿದೆಯೋ, ಅವರ ಪಕ್ಷದ ನಾಯಕರೇ ಕರೆ ಮಾಡಿ, ಮುಖ್ಯಮಂತ್ರಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಈಗ ಆ ವಿಚಾರ ಮಾತನಾಡುವುದು ಬೇಡ’ ಎಂದು ಉತ್ತರಿಸಿದರು.

ಬಿಟ್ ಕಾಯಿನ್ ವಿಚಾರವಾಗಿ ತಲೆಕೆಡಿಸಿಕೊಳ್ಳಬೇಡಿ ಎಂದು ಪ್ರಧಾನಿ ಧೈರ್ಯ ತುಂಬಿದ್ದಾರೆ ಎಂಬ ಬೊಮ್ಮಾಯಿ ಅವರ ಹೇಳಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ಬಹಳ ಸಂತೋಷ. ಆ ಪ್ರಕರಣದ ವಿಚಾರವನ್ನು ಜನರ ಮುಂದೆ ಬಿಚ್ಚಿಡಲಿ. ಈ ವಿಚಾರವನ್ನು ಪ್ರಧಾನಿ ಮುಂದೆ ಇವರು ಪ್ರಸ್ತಾಪ ಮಾಡಿದ್ದೇಕೆ? ಅವರು ಯಾಕೆ ತಲೆಕೆಡಿಸಿಕೊಳ್ಳಬೇಡಿ ಎಂದರು. ಯಾರಿಗಾದರೂ ತೊಂದರೆ, ಲಾಸ್ ಆಗಿದೆಯಾ? ಹೊರ ರಾಷ್ಟ್ರಗಳ ಹಣ ಹೋಗಿದೆಯಾ? ಅವರ ಹಸ್ತಕ್ಷೇಪ ಇದೆಯಾ? ಪ್ರಕರಣ ಹೇಗೆ ನಡೆದಿದೆ? ಯಾಕೆ ಬಂಧಿಸಿ ವಿಚಾರಣೆ ಮಾಡಿದರು? ಬಿಟ್ ಕಾಯಿನ್ ವಿಚಾರದಲ್ಲೇ ಯಾಕೆ ಎಫ್ಐಆರ್ ದಾಖಲಿಸಿದರು? ಎಲ್ಲ ಮಾಹಿತಿ ನೀಡಿ ಸ್ಪಷ್ಟತೆ ನೀಡಲಿ. ಕೆಲವು ಮಾಹಿತಿಗಳನ್ನು ಮಾತ್ರ ಮಾಧ್ಯಮಗಳಿಗೆ ಬಿಡುಗಡೆ ಮಾಡುವುದೇಕೆ?’ ಎಂದರು.

ಮಾಮನಿ ಅವರು ಪ್ರಧಾನಿ ಅವರಿಗೆ ಬರೆದ ಪತ್ರದಲ್ಲಿ ಬಿಜೆಪಿ ನಾಯಕರ ಹೆಸರಿದೆ ಎಂಬ ಪ್ರಶ್ನೆಗೆ, ‘ಆ ಪತ್ರದಲ್ಲಿರುವ ಹೆಸರುಗಳ ಬಗ್ಗೆ ಬಿಜೆಪಿ ನಾಯಕರು ಯಾಕೆ ಮಾತನಾಡುತ್ತಿಲ್ಲ? ಅದು ಸತ್ಯವೋ? ಸುಳ್ಳೋ ಎಂದು ನಾನು ಹೇಳುವುದಿಲ್ಲ. ಇದೆಲ್ಲವೂ ತನಿಖೆಯಾಗಬೇಕಲ್ಲವೇ?’ ಎಂದರು.

ಕಾಂಗ್ರೆಸ್ ನಾಯಕರು ಬಾಯಿ ಚಪಲಕ್ಕೆ ಮಾತನಾಡಬಾರದು, ದಾಖಲೆ ಇಟ್ಟುಕೊಂಡು ಮಾತನಾಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿಯವರು ಬಾಯಿ ಚಪಲಕ್ಕಾಗಿಯೇ ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿದ್ದಾರೆ. ಮಾಧ್ಯಮಗಳ ಮೂಲಕ ಕಾಂಗ್ರೆಸ್ ನಾಯಕರ ಹೆಸರು ಹರಿಬಿಡುತ್ತಿದ್ದಾರೆ’ ಎಂದರು.

Join Whatsapp