ಹೆಣ್ಣುಮಕ್ಕಳು 15ರ ಹರೆಯದಲ್ಲೇ ಸಂತಾನೋತ್ಪತ್ತಿ ಮಾಡಬಹುದಾದರೆ ವಿವಾಹದ ವಯಸ್ಸು ಹೆಚ್ಚಿಸುವುದೇಕೆ? : ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಭೋಪಾಲ್ : ಹೆಣ್ಣು ಮಕ್ಕಳು 15 ವರ್ಷ ಪ್ರಾಯದಲ್ಲೇ ಸಂತಾನೋತ್ಪತ್ತಿ ಮಾಡಬಹುದಾಗಿರುವುದರಿಂದ ವಿವಾಹದ ವಯಸ್ಸನ್ನು ಈಗಿನ 18ರಿಂದ 21ಕ್ಕೆ ಏಕೆ ಏರಿಸಬೇಕು? ಎಂದು ಕಾಂಗ್ರೆಸ್ ನಾಯಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮಧ್ಯಪ್ರದೇಶದ ಮಾಜಿ ಪಿಡಬ್ಲ್ಯೂಡಿ ಸಚಿವ, ಮಾಜಿ ಸಿಎಂ ಕಮಲನಾಥ್ ಆಪ್ತರಾಗಿರುವ ಸಜ್ಜನ್ ಸಿಂಗ್ ವರ್ಮಾರ ಈ ಹೇಳಿಕೆ ದೇಶಾದ್ಯಂತ ಕಾಂಗ್ರೆಸ್ ಗೆ ಮುಜುಗರವನ್ನುಂಟು ಮಾಡಿದೆ.
ಇದನ್ನು ನಾನಾಗಿಯೇ ಹೇಳುತ್ತಿಲ್ಲ. ವೈದ್ಯರ ವರದಿಗಳ ಪ್ರಕಾರ, ಬಾಲಕಿಯರು 15 ವರ್ಷ ಪ್ರಾಯದಲ್ಲಿಯೇ ಮಕ್ಕಳನ್ನು ಹೆರಬಹುದಾಗಿದೆ. ಇದೇ ಕಾರಣಕ್ಕೆ ಕನಿಷ್ಠ 18 ವರ್ಷ ವಯಸ್ಸಿನ ಯುವತಿ ವಿವಾಹವಾಗಲು ಪ್ರಬುದ್ಧಳು ಎಂದು ತಿಳಿಯಲಾಗಿದೆ. ಯುವತಿಯರು 18 ವರ್ಷದ ಬಳಿಕ ತಮ್ಮ ಅತ್ತೆ ಮಾವನ ಮನೆಗೆ ಹೋಗಿ ಅಲ್ಲಿ ಖುಷಿಯಾಗಿರಬೇಕು ಎಂದು ಸಜ್ಜನ್ ಸಿಂಗ್ ಹೇಳಿರುವುದಾಗಿ ವರದಿಗಳು ತಿಳಿಸಿವೆ.
ಯುವತಿಯರ ವಿವಾಹ ವಯಸ್ಸು 18ರಿಂದ 21ಕ್ಕೆ ಏರಿಸಬೇಕು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿರುವ ಬಗ್ಗೆ ಅವರು ಪ್ರತಿಕ್ರಿಯಿಸುವ ಭರದಲ್ಲಿ ಆಕ್ಷೇಪಾರ್ಹ ಹೇಳಿಕೆಯನ್ನು ಸಿಂಗ್ ನೀಡಿದ್ದಾರೆ. ಸಿಂಗ್ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.