ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿಗೆ ಮುಸ್ಲಿಮರ ಮತ ಕೇಳಲು ನಾಚಿಕೆಯಾಗುವುದಿಲ್ಲವೆ?: ಶ್ರೀನಾಥ್ ಪೂಜಾರಿ ಕಿಡಿ

Prasthutha|

ಸಿಂದಗಿ: ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದ ಆರೋಪಿಗಳಿಗೆ ಜಾಮೀನು ನೀಡಲು ಸಹಕರಿಸಿದ ಹಾಗೂ ನೂತನ ಕ್ರೀಡಾಂಗಣದಲ್ಲಿರುವ ಮಸೀದಿಯನ್ನು ಇಂದಿನ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿರುವ ರಮೇಶ ಭೂಸನೂರರವರು ತೆರವುಗೊಳಿಸುವಾಗ ಈಗಿನ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಯಾವುದೇ ರೀತಿಯ ಪ್ರತಿಭಟನೆ ಮಾಡದೇ ಮೌನ ಸಮ್ಮತಿ ಸೂಚಿಸಿರುವುದು ಮನುವಾದಿ ಮನಸ್ಥಿತಿಯನ್ನು ತೋರಿಸುತ್ತದೆ. ಪ್ರಸ್ತುತ ಸಿಂದಗಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಶೋಕ ಮನಗೂಳಿ ಅವರಿಗೆ ಮುಸ್ಲಿಂ ಮತ ಕೇಳಲು ನಾಚಿಕೆಯಾಗುವುದಿಲ್ಲವೆ? ಎಂದು ಕಳೆದ ಲೋಕಸಭಾ ಬಿಎಸ್ಪಿ ಅಭ್ಯರ್ಥಿ ಆಗಿದ್ದ ನ್ಯಾಯವಾದಿ ಶ್ರೀನಾಥ್ ಪೂಜಾರಿ ಪ್ರಶ್ನಿಸಿದ್ದಾರೆ.

- Advertisement -


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಗರಡಿಯಲ್ಲಿ ಬೆಳೆದಿರುವ ಅಶೋಕ ಮನಗೂಳಿ ಅವರು ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತಾರೆ ಎಂಬ ಭರವಸೆಯೇ ಸಿಂದಗಿ ವಿಧಾನಸಭಾ ಕ್ಷೇತ್ರದ ಅಲ್ಪಸಂಖ್ಯಾತರಿಗೆ ಇಲ್ಲದಂತಾಗಿದೆ. ಅದೇ ತೆರನಾಗಿ ಬಿಜೆಪಿ ಅಭ್ಯರ್ಥಿ ಸಹ ಗೋಮುಖ ವ್ಯಾಘ್ರವೇ ಆಗಿದ್ದಾರೆ. ಅವರು ಸಹ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶೂನ್ಯ ಎಂದು ಕಿಡಿಕಾರಿದರು.


ಸಿಂದಗಿ ವಿಧಾನಸಭಾ ಕ್ಷೇತ್ರವನ್ನು ಹಿಂದುಳಿದ ವರ್ಗದವರಿಗೆ ನೀಡುವ ಸಂಪ್ರದಾಯವನ್ನು ಎಲ್ಲ ಪಕ್ಷದವರು ಪಾಲಿಸುತ್ತಾ ಬಂದಿದ್ದರು, ಕಾಂಗ್ರೆಸ್ ಸಹ ಕಳೆದ ಬಾರಿ ಹಿಂದುಳಿದ ವರ್ಗಕ್ಕೆ ಸೇರಿದ ಹಾಲುಮತ ಸಮುದಾಯಕ್ಕೆ ಟಿಕೆಟ್ ನೀಡಿತ್ತು, ಆದರೆ ಈ ಅವಕಾಶವನ್ನು ಹಿಂದುಳಿದ ವರ್ಗದವರಿಂದ ಕಸಿದುಕೊಂಡಿರುವ ಅಶೋಕ ಮನಗೂಳಿ ಹಿಂದುಳಿದ ವರ್ಗಗಳಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

- Advertisement -

ಅಶೋಕ ಮನಗೂಳಿ ಅವರಿಂದಾಗಿ ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯ ಎನ್ನುವುದು ಗಗನಕುಸುಮವಾಗಿದೆ. ಹಾಲುಮತ ಸಮುದಾಯಕ್ಕೆ ನೀಡಿದ ಟಿಕೇಟ್ ಅನ್ನು ಈ ಬಾರಿ ಅಶೋಕ ಮನಗೂಳಿ ಕಸಿದುಕೊಂಡು ಹಾಲುಮತ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ, ಈ ಚುನಾವಣೆಯಲ್ಲಿ ಹಾಲುಮತ ಸಮಾಜದ ಸಹೋದರರು ಈ ಚುನಾವಣೆಯಲ್ಲಿ ಅಶೋಕ ಮನಗೂಳಿ ಅವರಿಗೆ ತಕ್ಕಪಾಠ ಕಲಿಸುವ ಮೂಲಕ ಹಾಲುಮತ ಶಕ್ತಿ ಹಾಗೂ ಒಗ್ಗಟ್ಟು ಪ್ರದರ್ಶಿಸಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.
ಬಹುದಿನಗಳ ಕಾಲ ವಿಜಯಪುರ ಜಿಲ್ಲೆ ಪ್ರಮುಖ ರಾಜಕೀಯ ಶಕ್ತಿಯಾಗಿದ್ದ ಗಂಗಾಮತಸ್ಥ, ತಳವಾರ, ಕೋಳಿ, ಕಬ್ಬಲಿಗ ಎಂದು ಕರೆಯಿಸಿಕೊಳ್ಳುವ ಅತೀ ದೊಡ್ಡ ಸಮುದಾಯವನ್ನೂ ರಾಜಕೀಯವಾಗಿ ಪ್ರಾತಿನಿಧ್ಯ ದೊರಕಿಸದಂತೆ ಮಾಡುವ ಮೂಲಕ ಅಶೋಕ ಮನಗೂಳಿ ಗಂಗಾಮತಸ್ಥ ಸಮುದಾಯದ ಬಾಂಧವರಿಗೂ ದೊಡ್ಡ ಅನ್ಯಾಯ ಮಾಡಿದ್ದಾರೆ. ಹಿಂದುಳಿದ ವರ್ಗ, ಗಂಗಾಮತಸ್ಥ ಸಮುದಾಯಗಳಿಗೆ ಆಗಿರುವ ಅನ್ಯಾಯದ ಬಗ್ಗೆ ನಾನು ಹಾಗೂ ತಂಡ ಮನೆ-ಮನೆಗೂ ಹೋಗಿ ಈ ಬಗ್ಗೆ ಜಾಗೃತಿ ಮೂಡಿಸಿ, ಆಗಿರುವ ಅನ್ಯಾಯದ ವಿರುದ್ಧ ಮತ ಚಲಾಯಿಸುವಂತೆ ಕೈ ಮುಗಿದು ಬೇಡಿಕೊಳ್ಳುವೆ. ದಲಿತ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ಸಮುದಾಯದ ಪ್ರತಿನಿಧಿಯಾಗಿ ಚುನಾವಣಾ ಕಣದಲ್ಲಿರುವ ನಾಜೀಯಾ ಅಂಗಡಿ ಅವರನ್ನು ಬೆಂಬಲಿಸಿ ಎಂದು ಕೋರುವೆ, ಪಕ್ಷಕ್ಕಿಂತ ನಮಗೆ ಸಮುದಾಯ ಮುಖ್ಯ ಎಂದರು.


ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ಅಥವಾ ಹಿಂದುಳಿದ ವರ್ಗದವರಿಗೆ ಟಿಕೇಟ್ ನೀಡಿದರೆ ಅವರ ಪರವಾಗಿಯೇ ನಾನು ಕೆಲಸ ಮಾಡುತ್ತಿದ್ದೆ.
ಬಸವನ ಬಾಗೇವಾಡಿ ಶಾಸಕರಾದ ಶಿವಾನಂದ ಪಾಟೀಲರು ಈ ಹಿಂದೆ ಯಾವ ಚುನಾವಣೆಯಲ್ಲಿ ಮುಂಚೂಣಿಯಲ್ಲಿ ನಿಂತು ಸಾರಥ್ಯ ವಹಿಸಿದ ಉದಾಹರಣೆ ಇಲ್ಲ, ಇಲ್ಲಿ ಸ್ವಜಾತಿ ಎನ್ನುವ ಕಾರಣಕ್ಕೆ ಅಶೋಕ ಮನಗೂಳಿ ಅವರ ಪ್ರಚಾರದಲ್ಲಿ ಶಿವಾನಂದ ಪಾಟೀಲರು ಮುಂಚೂಣಿಯಲ್ಲಿದ್ದಾರೋ ಅಥವಾ ಮುಂದೆ ಇದೇ ಕ್ಷೇತ್ರದಲ್ಲಿ ಅವರೇ ಸ್ಪರ್ಧಿಸಲಿದ್ದಾರೋ ಎಂಬುದು ಯಕ್ಷಪ್ರಶ್ನೆಯಾಗಿದೆ ಎಂದು ಶ್ರೀನಾಥ್ ಪೂಜಾರಿ ಹೇಳಿದರು.


ಸಂವಿಧಾನದ ಆಶೋತ್ತರಗಳಿಗೆ ಧಕ್ಕೆ ತರುತ್ತಿರುವ ಬಿಜೆಪಿ, ಅದನ್ನು ಪ್ರತಿಭಟಿಸದೇ ಸಮ್ಮತಿಸುತ್ತಿರುವ ಕಾಂಗ್ರೆಸ್ ಎರಡು ಸಹ ಮಾರಕವೇ. ಈ ಎರಡು ಪಕ್ಷಗಳು ಸಾಮಾಜಿಕ ನ್ಯಾಯವನ್ನೇ ಮೂಲೆಗುಂಪಾಗಿಸಿವೆ ಹಾಗೂ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಅಪಾಯದಂಚಿನಲ್ಲಿರುವ ಈ ಸಂಧರ್ಭದಲ್ಲಿ ದಲಿತ ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗದ ಜನನಾಯಕರು ಮುಖಂಡರುಗಳು ಸಮುದಾಯದ ಭಾವುಟಗಳನ್ನು ಹಿಡಿದುಕೊಂಡು ಮತಯಾತನೆ ಮಾಡುತ್ತಿರುವುದು ನಾಚಿಕೆಗೇಡಿನ ಸಂಗತಿ ಆಗಿದೆ ಎಂದ ತಿಳಿಸಿದರು.


ಚುನಾವಣೆ ಬಂದಾಗ ಅಲ್ಪಸಂಖ್ಯಾತರು, ಹಿಂದುಳಿದವರು ಕಾಂಗ್ರೆಸ್ ಪಕ್ಷಕ್ಕೆ ನೆನಪಾಗುತ್ತಾರೆ, ಆದರೆ ಟಿಕೆಟ್ ಹಂಚಿಕೆ ವಿಷಯ ಬಂದಾಗ ಈ ಯಾವ ಸಮುದಾಯದವರು ಕಾಂಗ್ರೆಸ್ ನಾಯಕರಿಗೆ ನೆನಪಾಗುವುದಿಲ್ಲ. ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತ, ದಲಿತ ಬಾಂಧವರು ಸಾಮಾಜಿಕ ನ್ಯಾಯಕ್ಕೆ ಮತ ಕೊಟ್ಟ ಪ್ರತೀಕವಾಗಿ ಅಲ್ಪಸಂಖ್ಯಾತ ಸಮುದಾಯದ ಸಹೋದರಿ ನಾಜೀಯಾ ಅಂಗಡಿ ಅವರಿಗೆ ಮತ ಚಲಾಯಿಸಬೇಕು ಎಂದು ಶ್ರೀನಾಥ್ ಪೂಜಾರಿ ಗೋಷ್ಠಿ ಮೂಲಕ ತಿಳಿಸಿದ್ದಾರೆ.



Join Whatsapp