ಎಲ್ಲಿದ್ಯಪ್ಪಾ.. ತೇಜಸ್ವಿ? ಆಕ್ಸಿಜನ್ ನೀಡುವುದಿಲ್ಲವೆಂದು ರಾಜ್ಯದ ವಿರುದ್ಧ ಸಮರ ಸಾರಿದ ಮೋದಿ ಬಗ್ಗೆ ಏಕೆ ತುಟಿ ಬಿಚ್ಚಲಿಲ್ಲ? : ಕಾಂಗ್ರೆಸ್ ಪ್ರಶ್ನೆ

Prasthutha|

ಬೆಂಗಳೂರು : ಎಲ್ಲಿದ್ಯಪ್ಪಾ.. ತೇಜಸ್ವಿ ಸೂರ್ಯನಾರಾಯಣ ರಾವ್? ಎಲ್ಲಿ ರೋಷ, ಆವೇಶ, ಆಕ್ರೋಶ, ಜನಪರ ಕಾಳಜಿ ಎಲ್ಲವೂ ಎಲ್ಲಿ ಹೋದವು? ಆಕ್ಸಿಜನ್ ನೀಡುವುದಿಲ್ಲವೆಂದು ಕರ್ನಾಟದ ವಿರುದ್ಧ ಸಮರ ಸಾರಿದ ಮೋದಿಯವರ ಬಗ್ಗೆ ಏಕೆ ತುಟಿ ಬಿಚ್ಚಲಿಲ್ಲ? ರಾಜ್ಯದ ಜನರ ಕಾಳಜಿ ವಹಿಸಲು ಕೋರ್ಟುಗಳೇ ಬರಬೇಕಾಯ್ತು, 25 ಸಂಸದರು ಎಲ್ಲಿ ಕಡಿದು ಗುಡ್ಡೆ ಹಾಕುತ್ತಿದ್ದಿರಿ? ಎಂದು ಬಿಬಿಎಂಪಿ ದಕ್ಷಿಣ ವಲಯ ವಾರ್ ರೂಮ್ ನಲ್ಲಿ ಕೋಮುದ್ವೇಷದ ಹೇಳಿಕೆಗಳನ್ನು ನೀಡಿದ್ದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮೊದಲ ಅಲೆಯಲ್ಲಿ ಹತ್ತು ಕೋಟಿ ಉದ್ಯೋಗ ನಷ್ಟ, ಎರಡನೇ ಅಲೆಯ ಪರಿಣಾಮದಲ್ಲಿ ಜೀವಗಳೇ ನಷ್ಟವಾಗುತ್ತಿವೆ. ನರೇಂದ್ರ ಮೋದಿ ಅವರ ಬೇಜವಾಬ್ದಾರಿತನ, ನಿರ್ಲಕ್ಷ್ಯ ದೇಶವನ್ನು ಎಲ್ಲಾ ಕ್ಷೇತ್ರದಲ್ಲೂ ಪಾತಾಳಕ್ಕೆ ತಳ್ಳುವುದು ನಿಸ್ಸಂಶಯ ಎಂದು ಆತಂಕ ವ್ಯಕ್ತಪಡಿಸಿದೆ.

- Advertisement -

ರಾಜ್ಯದ ಜನತೆಯ ಜವಾಬ್ದಾರಿ ಇದ್ದಿದ್ದು – 25 ಸಂಸದರಿಗೆ ಜನತೆಯ ರಕ್ಷಣೆಯ ಹೊಣೆ ಇದ್ದಿದ್ದು – ರಾಜ್ಯ ಬಿಜೆಪಿ ಸರ್ಕಾರಕ್ಕೆ ಕರ್ನಾಟಕದ ಮೇಲೆ ಆಕ್ಸಿಜನ್ ಯುದ್ಧ ಸಾರಿದ್ದ ಮೋದಿ ಸರ್ಕಾರದ ಯಾರೊಬ್ಬರೂ ಮಾತಾಡದೆ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳು ನೆರವಿಗೆ ನಿಂತು, ಜನರ ಪರವಾಗಿ ಮಾತನಾಡುವ ಸ್ಥಿತಿ ಬಂದಿದ್ದು ಬಿಜೆಪಿ ಆಡಳಿತದ ಅಧೋಗತಿಗೆ ಸಾಕ್ಷಿ ಎಂದು ಹೇಳಿದೆ.

ಡಬಲ್ ಇಂಜಿನ್‌ ಸರ್ಕಾರಗಳಲ್ಲ ಇವು ಡಬಲ್ ಟ್ರಬಲ್ ಸರ್ಕಾರಗಳು. ಮೋದಿ ಸರ್ಕಾರದ ಅನ್ಯಾಯದಿಂದ ರಾಜ್ಯದ ಜನತೆಯ ರಕ್ಷಣೆ ಹೈಕೋರ್ಟ್ ಬರಬೇಕಾಯ್ತು, ಸುಪ್ರೀಂ ಕೋರ್ಟ್ ಜೊತೆ ನಿಲ್ಲಬೇಕಾಯ್ತು. ನೆರೆ ಪರಿಹಾರದಿಂದ ಆಕ್ಸಿಜನ್‌ವರೆಗೂ ರಾಜ್ಯದ ಪರ ನಿಲ್ಲದ 25 ಸಂಸದರು ಅನಗತ್ಯ. ರಾಜೀನಾಮೆ ಕೊಟ್ಟು ಯಾವುದಾದರೂ ನೀರಿಲ್ಲದ ಬಾವಿ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದೆ.

ಪರದೇಶಗಳ, ಇತರ ಸೇವಾ ಸಂಸ್ಥೆಗಳ ನೆರವನ್ನು ತಮ್ಮದೇ ಎಂದು ಬಿಂಬಿಸಿಕೊಳ್ಳುವ ಹೀನಾಯ ಸ್ಥಿತಿಗೆ ಬಿಜೆಪಿ ಬಂದಿದೆ, ಮೋದಿಯವರ ‘ಆತ್ಮ ನಿರ್ಭರ’ ಕತೆ ‘ಆತ್ಮ ಬರ್ಬರ’ ಆಗುವಲ್ಲಿಗೆ ಬಂದು ನಿಂತಿದೆ! ರಾಜ್ಯದ ಆಕ್ಸಿಜನ್ ರಾಜ್ಯವೇ ಉಪಯೋಗಿಸಲಾಗದ ಸ್ಥಿತಿಗೆ ತಂದಿದ್ದಾರೆ ಬಿಜೆಪಿ. ಕರ್ನಾಟಕಕ್ಕಿಲ್ಲವೇ ‘ಆತ್ಮ ನಿರ್ಭರ’ ಬಿಜೆಪಿ ಸರ್ಕಾರವೇ? ಎಂದು ಕಿಡಿಕಾರಿದೆ.

- Advertisement -