ಮಂಗಳೂರು : ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ದಿವಂಗತ ಆಸ್ಕರ್ ಫೆರ್ನಾಂಡೀಸ್ ಅವರ ಮೊದಲ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರುಗಿತು. ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ರಮನಾಥ ರೈ ಸೇರಿದಂತೆ ಹಲವು ಮುಖಂಡರು ಆಸ್ಕರ್ ಫೆರ್ನಾಂಡಿಸ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಮನಾಥ ರೈ, ಪ್ರಾಮಾಣಿಕರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಓರ್ವ ಅಜಾತ ಶತ್ರು ಎಂದು ಬಣ್ಣಿಸಿದರು. ಪಕ್ಷ ಮತ್ತು ಸರಕಾರಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರೂ ಸಾಮಾನ್ಯ ಕಾರ್ಯಕರ್ತರಂತೆ ಗುರುತಿಸಿಕೊಂಡಿದ್ದರು, ಅವರ ಬದುಕು ಮಾದರಿ ಎಂದು ನುಡಿದರು.
ಕಾಂಗ್ರೆಸ್‌ನ ಪ್ರಮುಖ ನಾಯಕರಾಗಿದ್ದ ಆಸ್ಕರ್ ಫೆರ್ನಾಂಡಿಸ್ ಅವರ ಸ್ಮರಣೆಗಾಗಿ ಶೀಘ್ರದಲ್ಲೇ ಮಲ್ಲಿಕಟ್ಟೆಯ ಕಾಂಗ್ರೆಸ್ ಕಚೇರಿಯ ಬಳಿ ಅವರ ಪುತ್ಥಳಿ ನಿರ್ಮಾಣ ಮಾಡುವುದಾಗಿ ರಮನಾಥ ರೈ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಕಾಂಗ್ರೆಸ್ ಮುಖಂಡರಾದ
ಇಬ್ರಾಹೀಂ ಕೋಡಿಜಾಲ್, ನವೀನ್ ಡಿಸೋಜ, ಶಾಹುಲ್ ಹಮೀದ್, ಶುಭೋದಯ ಆಳ್ವ, ಲತೀಫ್ ಕುಂದಕ್, ಎಸ್.ಅಪ್ಪಿ, ಸಮರ್ಥ್ ಭಟ್, ನೀರಜ್ ಚಂದ್ರಪಾಲ್, ಸಬಿತಾ ಮಿಸ್ಕಿತ್, ಶಬ್ಬೀರ್ ಎಸ್, ನಝೀರ್ ಬಜಾಲ್, ಟಿ.ಕೆ.ಸುಧೀರ್, ಜೆಸಿಂತಾ ಆಲ್ಫ್ರೆಡ್, ಮಂಜುಳಾ ನಾಯಕ್, ಯಶವಂತ ಪ್ರಭು ಮತ್ತಿತರು ಉಪಸ್ಥಿತರಿದ್ದರು.