ಕೊಲೊಂಬೊ : ಶ್ರೀಲಂಕಾದಲ್ಲಿ ಕೋವಿಡ್ 19 ಬಾಧಿತ ಮುಸ್ಲಿಂ ಮಹಿಳೆಯೊಬ್ಬರ ಮೃತ ದೇಹವನ್ನು ದಫನ ಮಾಡುವ ಬದಲು, ಬಲವಂತವಾಗಿ ದಹಿಸಲಾಗಿದೆ. ಆದರೆ, ಬಳಿಕ ಆಕೆ ಕೋವಿಡ್ 19ನಿಂದ ಸಾವಿಗೀಡಾಗಿಲ್ಲ ಎಂಬುದು ದೃಢಪಟ್ಟಿದೆ.
ಕೊಲೊಂಬೊದ ಮೊಡೆರಾದಲ್ಲಿ ಈ ಘಟನೆ ನಡೆದಿದೆ. ಕೋವಿಡ್ 19ರಿಂದ ಮೃತಪಟ್ಟವರೆನ್ನಲಾದ ಮುಸ್ಲಿಮರಲ್ಲಿ ಈಕೆ ನಾಲ್ಕನೆಯವರು ಎಂದು ವರದಿಯೊಂದು ತಿಳಿಸಿದೆ. ಕೋವಿಡ್ 19ರ ಕಾರಣದಿಂದ ಮೃತಪಟ್ಟವರು ಯಾವುದೇ ಧರ್ಮದವರಾಗಿದ್ದರೂ, ಅವರನ್ನು ದಹಿಸುವಂತೆ ಅಲ್ಲಿನ ಸರಕಾರ ಆದೇಶಿಸಿರುವುದು, ಅಲ್ಪಸಂಖ್ಯಾತ ಸಮುದಾಯಗಳ ಧಾರ್ಮಿಕ ಭಾವನೆಗೆ ಧಕ್ಕೆಯನ್ನುಂಟು ಮಾಡಿದೆ ಎಂಬ ಆರೋಪಗಳು ಕೇಳಿಬಂದಿವೆ.
ಇಸ್ಲಾಮಾಫೋಬಿಯಾ ಚಿಂತನೆಯು ಸರಕಾರವನ್ನು ಈ ರೀತಿ ಮಾಡುವಂತೆ ಪ್ರೇರಣೆ ನೀಡಿದೆ ಎಂದು ಆಪಾದಿಸಲಾಗಿದೆ.