ಮೂಡುಬಿದಿರೆ: ಹಿಂದುತ್ವ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ವಕೀಲ ಚೇತನ್ ಕುಮಾರ್ ಶೆಟ್ಟಿ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ ಎಂಬ ಅರೋಪದ ಹಿನ್ನೆಲೆಯಲ್ಲಿ ಹಿಂದೂ ಜಾಗರಣ ವೇದಿಕೆಯ 8 ಮಂದಿಯ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಕೀಲ ಚೇತನ್ ಕುಮಾರ್ ಶೆಟ್ಟಿ ವಿರುದ್ಧ ಆರೋಪಿಗಳು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಿಂದೂ ಜಾಗರಣ ವೇದಿಕೆಯ ಮಾಹಿತಿಯ ಆಧಾರದಲ್ಲಿ ಅಲಂಗಾರು ಸಮೀಪದ ಮನೆಯೊಂದರಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಮೂಡುಬಿದಿರೆ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದರು. ಕೆಲವು ದಿನಗಳ ನಂತರ ನ್ಯಾಯಾಲಯದಲ್ಲಿ ಆರೋಪಿಗಳಿಗೆ ಜಾಮೀನು ಮಂಜೂರಾಗಿತ್ತು.
‘ಹಿಂದೂ ಸಂಘಟನೆ ಯಲ್ಲಿ ಗುರುತಿಸಿಕೊಂಡಿದ್ದ ವಕೀಲ ಚೇತನ್ ಕುಮಾರ್ ಶೆಟ್ಟಿ ಆರೋಪಿಗಳಿಗೆ ಜಾಮೀನು ಕೊಡಿಸಿದ್ದಾರೆ’ ಎನ್ನುವ ಅರ್ಥದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗಿತ್ತು. ಈ ಬಗ್ಗೆ ವಕೀಲ ಚೇತನ್ ಕುಮಾರ್ ಶೆಟ್ಟಿ ಅವರು ಹಿಂದೂ ಜಾಗರಣ ವೇದಿಕೆಯ ಮುಖಂಡರಾದ ಸಮಿತ್ರಾಜ್, ರಾಜೇಶ್, ಸಂದೀಪ್ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ದಯಾನಂದ ಹೆಗ್ಡೆ, ವಿಜಯ ಕೊಡಂಗಲ್ಲು, ಸಂದೀಪ್ ಸುವರ್ಣ ಹಾಗೂ ಶ್ರೀನಿವಾಸ್ ವಿರುದ್ಧ ಮೂಡುಬಿದಿರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.