ಮಂಗಳೂರು : ಬಿಜೆಪಿ ಬೆಳ್ತಂಗಡಿ ಮಂಡಲ ಅಭಿನಂದನಾ ಕಾರ್ಯಕ್ರಮದಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದಾರೆಂದು ಆರೋಪಿಸಿ ಸಚಿವ ಈಶ್ವರಪ್ಪ ಮತ್ತು ಶಾಸಕ ಹರೀಶ್ ಪೂಂಜಾ ವಿರುದ್ಧ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪೊಲೀಸ್ ದೂರು ನೀಡಲಾಗಿದೆ. ವಿವಿಧ ಪೊಲೀಸ್ ಠಾಣೆಗಳಲ್ಲಿ ಎಸ್ ಡಿಪಿಐ ಕಾರ್ಯಕರ್ತರು ದೂರು ನೀಡಿ, ಸಚಿವ ಈಶ್ವರಪ್ಪ ಮತ್ತು ಶಾಸಕ ಹರೀಶ್ ಪೂಂಜಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕುಂಬ್ರ ಎಸ್ ಡಿಪಿಐ ವಲಯ ಸಮತಿ ಸದಸ್ಯ ಖಾದರ್ ಮಾಡಾವು ದೂರು ದಾಖಲಿಸಿದ್ದಾರೆ. ಈ ವೇಳೆ ಗ್ರಾಮ ಪಂಚಾಯತ್ ಸದಸ್ಯರಾದ ಸಿರಾಜ್ ಪರ್ಪುಂಜ, ನಾಗೇಶ್ ಕುರಿಯ ಮತ್ತು ಎಸ್ ಡಿಪಿಐ ಸಂಪ್ಯ ವಲಯ ಸದಸ್ಯ ರಫೀಕ್ ಸಂಟ್ಯಾರು ಉಪಸ್ಥಿತರಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ, ಭಾಷಣದ ವೀಡಿಯೊ ಸಿಡಿ ಸಹಿತ ದಾಖಲೆಗಳೊಂದಿಗೆ ಎಸ್ ಡಿಪಿಐಯ ಮುಸ್ತಫಾ ಎಂಬವರು ದೂರು ನೀಡಿದ್ದಾರೆ. ಈ ವೇಳೆ ಅವರೊಂದಿಗೆ ಝಕಾರಿಯಾ ಕೊಡಿಪ್ಪಾಡಿ, ಶುಕೂರು ಕುಪ್ಪೆಟ್ಟಿ, ರಶೀದ್ ಮಠ ನಿಯೋಗದಲ್ಲಿದ್ದರು.
ವಿಟ್ಲ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ಎಸ್ ಡಿಪಿಐ ಅಧ್ಯಕ್ಷ ರಹೀಮ್ ಎಂಬವರು ದೂರು ನೀಡಿದ್ದಾರೆ. ಈ ವೇಳೆ ಬಂಟ್ವಾಳ ಕ್ಷೇತ್ರ ಸಮಿತಿ ಕಾರ್ಯದರ್ಶಿ ಕಲಂದರ್ ಪರ್ತಿಪ್ಪಾಡಿ, ಪುತ್ತೂರು ವಿಧಾನ ಸಮಿತಿ ಸದಸ್ಯ ಶಾಕಿರ್ ಅಳಕೆಮಜಲು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಮೆಹಮೂದ್ ಕಡಂಬು ಉಪಸ್ಥಿತರಿದ್ದರು.
ಬಂಟ್ವಾಳ ನಗರ ಠಾಣೆಯಲ್ಲೂ ಎಸ್ ಡಿಪಿಐ ಮುಖಂಡರು ಶಾಸಕ ಹರೀಶ್ ಪೂಂಜಾ ಮತ್ತು ಸಚಿವ ಈಶ್ವರಪ್ಪ ವಿರುದ್ಧ ದೂರು ನೀಡಿದ್ದಾರೆ. ಎಸ್ ಡಿಪಿಐ ಬಂಟ್ವಾಳ ಕ್ಷೇತ್ರ ಸಮಿತಿ ಸದಸ್ಯ ಮುನೀಶ್ ಅಲಿ ದೂರು ನೀಡಿದ್ದಾರೆ. ಈ ಸಂದರ್ಭ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್., ಬಂಟ್ವಾಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಯೂಸುಫ್ ಆಲಡ್ಕ, ಕ್ಷೇತ್ರ ಜೊತೆ ಕಾರ್ಯದರ್ಶಿ ಸಲೀಂ ಆಲಾಡಿ ಮತ್ತು ಮಲಿಕ್ ಕೊಳಕೆ ಉಪಸ್ಥಿತರಿದ್ದರು.
ಬಿಜೆಪಿ ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜಾ ಮತ್ತು ಸಚಿವ ಈಶ್ವರಪ್ಪ ಕೋಮು ಭಾವನೆಗೆ ಧಕ್ಕೆಯಾಗುವ ರೀತಿ, ಉದ್ರೇಕಕಾರಿಯಾಗಿ ಭಾಷಣ ಮಾಡಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ.