ಬರ್ಮಿಂಗ್ಹ್ಯಾಮ್ : 22ನೇ ಆವೃತ್ತಿಯ ಪ್ರತಿಷ್ಠಿತ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಅದ್ಧೂರಿ ಚಾಲನೆ ದೊರೆತಿದೆ.
ಇಂಗ್ಲೆಂಡ್ ನ ಬರ್ಮಿಂಗ್ಹ್ಯಾಮ್ ನಲ್ಲಿರುವ ಅಲೆಕ್ಸಾಂಡರ್ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭದಲ್ಲಿ ಇಂಗ್ಲೆಂಡ್ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಿಂಧು –ಮನ್ ಪ್ರೀತ್ ಧ್ವಜಧಾರಿ
ಎರಡು ಒಲಿಂಪಿಕ್ಸ್ ಪದಕ ವಿಜೇತ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಕಾಮನ್ವೆಲ್ತ್ ಕ್ರೀಡಾಕೂಟದ ಪಥಸಂಚಲನದಲ್ಲಿ ತ್ರಿವರ್ಣ ಧ್ವಜ ಹಿಡಿದು ಭಾರತ ತಂಡವನ್ನು ಮುನ್ನಡೆಸಿದರು. ಸಿಂಧು ಜತೆಗೆ ಪುರುಷರ ಹಾಕಿ ತಂಡದ ನಾಯಕ ಮನ್ ಪ್ರೀತ್ ಸಿಂಗ್ ಅವರಿಗೂ ಧ್ವಜಧಾರಿಯಾಗಲು ಅವಕಾಶ ಲಭಿಸಿತು. ಕಾಮನ್ವೆಲ್ತ್ ಆಯೋಜನಾ ಸಮಿತಿಯು, ಪಥಸಂಚಲನದಲ್ಲಿ ಭಾಗವಹಿಸುವ ಪ್ರತಿಯೊಂದು ದೇಶವೂ ಓರ್ವ ಪುರುಷ ಮತ್ತು ಓರ್ವ ಮಹಿಳಾ ಕ್ರೀಡಾಪಟುವನ್ನು ಧ್ವಜಧಾರಿಯಾಗಿ ಹೆಸರಿಸಬೇಕು ಎಂದು ಅಂತಿಮ ಕ್ಷಣದಲ್ಲಿಸೂಚನೆ ನೀಡಿದ ಪರಿಣಾಮ ಮನ್ ಪ್ರೀತ್ ಸಿಂಗ್ ಅವರಿಗೂ ಅವಕಾಶ ಲಭಿಸಿತು.
ಬರ್ಮಿಂಗ್ಹ್ಯಾಮ್ ನಗರದ ಇತಿಹಾಸವನ್ನು ನೆನಪಿಸುವ ಕಬ್ಬಿಣದ ಹಲವು ಭಾಗಗಳಿಂದ ನಿರ್ಮಿಸಲಾಗಿದ್ದ ಬೃಹತ್ ಗಾತ್ರದ ಗೂಳಿಯ ಆಕಾರವು ಉದ್ಘಾಟನಾ ಸಮಾರಂಭದ ಮುಖ್ಯ ಆಕರ್ಷಣೆಯಾಗಿತ್ತು.